ಬೆಂಗಳೂರು: ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಚಟುವಟಿಕೆಯನ್ನು ನಿರ್ಬಂಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದ ಪತ್ರದ ವಿಚಾರ ಬಹು ಚರ್ಚೆಯಾಗುತ್ತಿದೆ. ಇದೇ ವಿಚಾರವಾಗಿ ಆರ್ ಎಸ್ ಎಸ್ ಚಟುವಟಿಕೆಯನ್ನು ಏಕೆ ನಿರ್ಬಂಧಿಸಬೇಕು ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದಂತ ರಮೇಶ್ ಬಾಬು ಬಿಚ್ಚಿಟ್ಟಿದ್ದಾರೆ. ಅವರ ಪತ್ರಿಕಾ ಹೇಳಿಕೆ ಮುಂದಿದೆ ಓದಿ.
ಕರ್ನಾಟಕ ರಾಜ್ಯದಲ್ಲಿ ಸನ್ಮಾನ್ಯ ಪ್ರಿಯಾಂಕ ಖರ್ಗೆ ರವರು ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ಮೇಲೆ ಚರ್ಚೆಯಾಗುತ್ತಿದೆ
ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಕರ್ನಾಟಕದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಕಾರಣಕ್ಕಾಗಿ ಸಂಘ ಪರಿವಾರದ ಮೇಲೆ ನಿಷೇಧವನ್ನು ಹೇರಲು ಮನವಿ ಮಾಡಿರುತ್ತಾರೆ. ಸದರಿ ಪತ್ರದ ಮೇಲೆ ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿರುತ್ತಾರೆ.
ಪ್ರಿಯಾಂಕ ಖರ್ಗೆ ರವರು ಸಾಂವಿಧಾನಿಕ ಅವಕಾಶದಲ್ಲಿ ಮತ್ತು ಕಾನೂನಾತ್ಮಕವಾಗಿ ಯಾರು ದೇಶ ವಿರೋಧಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಅಥವಾ ರಾಜ್ಯ ಸರ್ಕಾರದ / ಅರೆ ಸರ್ಕಾರದ ಸಂಸ್ಥೆಗಳನ್ನು ತಮ್ಮ ಕಾರ್ಯ ಸಾಧನೆಗೆ, ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಅಂತವರ ಮೇಲೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುತ್ತಾರೆ ಈ ಪತ್ರದಿಂದ ಕಂಗೆಟ್ಟಿರುವ ಭಾರತೀಯ ಜನತಾ ಪಕ್ಷದ ಕೆಲವು ನಾಯಕರು, ವಿಶೇಷವಾಗಿ ಅಬ್ಬೆಪಾರಿ ನಾಯಕರುಗಳು ಪ್ರಿಯಾಂಕ ಖರ್ಗೆರವರ ಮೇಲೆ ಹತಾಶವಾದ ಹೇಳಿಕೆಗಳನ್ನು ಮಾಡುತ್ತಿದ್ದಾರೆ
ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಚಳುವಳಿಯಲ್ಲಿ ಎಂದು ಬಾಗಿ ಆಗಿರಲಿಲ್ಲ. ಈ ಸಂಘವು ರಾಷ್ಟ್ರಧ್ವಜವನ್ನು ಅಂದರೆ ತ್ರಿವರ್ಣ ಧ್ವಜವನ್ನು ಮತ್ತು ಸಂವಿಧಾನವನ್ನು ವಿರೋಧ ಮಾಡಿರುವ ಸತ್ಯವನ್ನು ಎಲ್ಲರೂ ತಿಳಿದಿರುತ್ತಾರೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ಆಡಳಿತ ಯಂತ್ರದೊಂದಿಗೆ ಶಾಮಿಲಾಗಿ ಭಾರತಕ್ಕೆ ಸಾಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರ ನಿರ್ಮಾಣಕ್ಕೆ ತನ್ನ ಅಸಮ್ಮತಿಯನ್ನು ಸೂಚಿಸಿದಂತಹ ಸಂಘ ಪರಿವಾರ, ಇಂದು ಅನೇಕ ಕಾರಣಗಳಿಗೆ ನಿಷೇಧಕ್ಕೆ ಒಳಗಾಗಿರುವುದನ್ನು ನಾವೆಲ್ಲರೂ ತಿಳಿದಿದ್ದೇವೆ.
ನಮ್ಮ ರಾಷ್ಟ್ರದಲ್ಲಿ ಮೂರು ಅವಧಿಗೆ ನಿಷೇಧಕ್ಕೆ ಒಳಗಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ, ಕೇಂದ್ರ ಸರ್ಕಾರಕ್ಕೆ ಮುಚ್ಚಳಕೆಯನ್ನು ಬರೆದು ಕೊಟ್ಟು ನಂತರ ಸಾಂಸ್ಕೃತಿಕ ಸಂಘಟನೆಯಲ್ಲಿ ತನ್ನ ಶಾಖೆಯನ್ನು ವಿಸ್ತಾರ ಗೊಳಿಸುತ್ತದೆ. ಆದರೆ ಅದೇ ಸಮಯದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಗೋಪ್ಯ ಚಟುವಟಿಕೆಗಳಿಂದ ಕೋಮುವಾದಿ ಘರ್ಷಣೆ ಆರೋಪಗಳಿಗೆ ಈಡಾಗಿರುತ್ತದೆ ಇಂತಹ ಅಕ್ರಮ ಚಟುವಟಿಕೆಗಳ ಆರೋಪದ ಮೇಲೆ ತನಿಖೆಗೆ ಮತ್ತು ಕ್ರಮಕ್ಕೆ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸರಿಯಾದ ಕ್ರಮವನ್ನು ಕೈಗೊಳ್ಳಲು ಪ್ರಿಯಾಂಕಾ ರವರು ಮನವಿ ಮಾಡಿರುತ್ತಾರೆ. ಅವರ ಪತ್ರದಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಅವರ ಮೇಲೆ ಇಲ್ಲಸಲ್ಲದ ಹತಾಶವಾದದ ಹೇಳಿಕೆಗಳನ್ನು ನೀಡುತ್ತಿದ್ದಾರೆ
ಸ್ವದೇಶಿ ಮಂತ್ರವನ್ನು ಜಪಿಸುವ ಸಂಘ ಪರಿವಾರದ ನಾಯಕರು, ಇಟಲಿಯ ಮುಸಲೋನಿಯಿಂದ ಕರಿ ಟೋಪಿ ಮತ್ತು ಸರ್ವಾಧಿಕಾರಿ ಹಿಟ್ಲರ್ ಮುಖಾಂತರ ಚಡ್ಡಿಯನ್ನು ತಮ್ಮ ಸಂಘದ ಶಾಖೆಗೆ ಸಮವಸ್ತ್ರವಾಗಿ ಬಳಸಿದ್ದರು. ಅದೇ ರೀತಿಯಾಗಿ ಅನೇಕ ಪಶ್ಚಿಮಾತ್ಯ ನಾಯಕರ ದೆಯೋದ್ದೇಶಗಳನ್ನು ತಮ್ಮ ಸಂಘದ ಮೂಲ ಉದ್ದೇಶಗಳಾಗಿ ಬಳಸಿರುತ್ತಾರೆ. ಇದನ್ನು ಬಲ್ಲವರು ಎಲ್ಲರೂ ಸಹ ಸಂಘ ಪರಿವಾರವನ್ನು ಅನುಮಾನದಿಂದ ನೋಡುವಂತ ಪರಿಸ್ಥಿತಿ ಇಂದಿಗೂ ಇರುತ್ತದೆ
ಪ್ರಿಯಾಂಕ ಖರ್ಗೆರವರನ್ನು ದಲಿತ ನಾಯಕರೇ ಅಲ್ಲವೆಂದು ಟೀಕಿಸುವ ಭಾರತೀಯ ಜನತಾ ಪಕ್ಷದ ಹೊಗಳು ಬಟ್ಟ ದಲಿತ ನಾಯಕರು, ತಾವು ನಿಜವಾಗಲೂ ದಲಿತ ಸಮುದಾಯದ ನಾಯಕರೆಂಬುದನ್ನು ಸಾಬೀತುಪಡಿಸಲಿ. ಇನ್ನು ಕೆಲವೇ ದಿನಗಳಲ್ಲಿ ಡಾ. ಅಂಬೇಡ್ಕರ್ ರವರು 1927ರಲ್ಲಿ ಮಹಾರಾಷ್ಟ್ರದಲ್ಲಿ ಸಂಘಟಿಸಿದ ಮಹಾ ಸತ್ಯಾಗ್ರಹದ ಮನುಸ್ಮೃತಿಯನ್ನು ಸುಟ್ಟ ಶತಮಾನೋತ್ಸವದ ಆಚರಣೆಗೆ ತಯಾರಾಗಲು ನಾನು ಇಂತಹ ದಲಿತ ನಾಯಕರಿಗೆ ಒತ್ತಾಯಿಸುತ್ತೇನೆ.
ಕೇವಲ ಯಾರನ್ನೋ ಪ್ರೀತಿಗೊಳಿಸಲು ಅಥವಾ ಅವರಿಂದ ಬಂಗಾರ ಲೇಪಿತ ಪ್ರಶಂಸೆ ಪತ್ರ ಪಡೆಯಲು ಹೊಗಳಿಕೆ ಮಾಡುವುದನ್ನು ಬಿಟ್ಟು ಅಂಬೇಡ್ಕರ್ ತತ್ವದ ಅನುಯಾಯಿಗಳಾಗಲು ಭಾರತೀಯ ಜನತಾ ಪಕ್ಷದ ದಲಿತ ನಾಯಕರಿಗೆ ಒತ್ತಾಯ ಮಾಡುತ್ತೇನೆ. ತಮ್ಮ ರಾಜಕೀಯ ಅನುಕೂಲಕ್ಕಾಗಿ ಮತಾಂತರಗೊಂಡು ಬಿಜೆಪಿಯಲ್ಲಿ ಕುರ್ಚಿ ಉಳಿಸಿಕೊಳ್ಳಲು ಈ ದಿನ ಪ್ರಿಯಾಂಕ ಖರ್ಗೆ ಅವರನ್ನು ಟೀಕಿಸುವ ಹತಾಶ ಪರಿಸ್ಥಿತಿಗೆ ಭಾರತೀಯ ಜನತಾ ಪಕ್ಷದ ಕೆಲವು ದಲಿತ ನಾಯಕರು ತಲುಪಿರುತ್ತಾರೆ. ಮಹಾರಾಷ್ಟ್ರದಲ್ಲಿ ಡಾಕ್ಟರ್ ಅಂಬೇಡ್ಕರ್ ಅವರು 1927ರಲ್ಲಿ ಮನುಷ್ಮುತಿಯನ್ನು ಸುಟ್ಟು ನೂರು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಅಂಬೇಡ್ಕರ್ ರವರ ಮಹಾ ಸತ್ಯಾಗ್ರಹದ ಶತಮಾನೋತ್ಸವಕ್ಕೆ ಅಣಿಯಾಗಲು ಬಿಜೆಪಿಯ ನಾಯಕರಿಗೆ ಒತ್ತಾಯಿಸುತ್ತೇನೆ.
ಪ್ರಿಯಾಂಕ ಖರ್ಗೆ ರವರು ತಮ್ಮ ಸಾಂವಿಧಾನಿಕ ಜವಾಬ್ದಾರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಮೇಲೆ ತನಿಖೆ ನಡೆಸಲು ಮುಖ್ಯಮಂತ್ರಿಗಳಿಗೆ ಕೋರಿರುತ್ತಾರೆ.ಇದಕ್ಕೆ ಸರಿಯಾದ ಅಥವಾ ಸಮಂಜಸವಾದ ಉತ್ತರವನ್ನು ಕೊಡಲು ಸಾಧ್ಯವಾಗದ ಸಂಗಪರಿ ವಾರದ ನಾಯಕರು ಭಾರತೀಯ ಜನತಾ ಪಕ್ಷದ ಕೆಲವು ಕಂಗೆಟ್ಟ ಅಬ್ಬೆ ಪಾರಿ ನಾಯಕರುಗಳ ಮೂಲಕ ಇಂತಹ ಓಲೈಸುವ ಹತಾಶವಾದ ಮನಸ್ಥಿತಿಯ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ.
ಆರೋಗ್ಯಕರವಾದಂತಹ ಚರ್ಚೆಗೆ ತೆಗೆದುಕೊಳ್ಳದ ಭಾರತೀಯ ಜನತಾ ಪಕ್ಷದ ನಾಯಕರು, ಚರ್ಚೆಯಿಂದ ಪಲಾಯನ ಮಾಡುತ್ತಿದ್ದಾರೆ. ದೇಶದಲ್ಲಿ ತ್ರಿವರ್ಣ ಧ್ವಜದ ಬದಲು ಭಗವ ಧ್ವಜವನ್ನು ಪ್ರತಿಪಾದಿಸಿದ ಸಂಗ ಪರಿವಾರದ ನಾಯಕರು ಮತ್ತು ಸಂವಿಧಾನದ ಬದಲು ಮನಸ್ಮೃತಿಯನ್ನು ಪ್ರತಿಪಾದಿಸಿದ ಸಂಘ ಪರಿವಾರದ ನಾಯಕರು ಯಾವ ನೈತಿಕತೆಯ ಮೇಲೆ ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುತ್ತಾರೆ? ಇವರು ಬ್ರಿಟಿಷ್ ಸರ್ಕಾರದೊಂದಿಗೆ ಶಾಮೀಲಾಗಿ ದೇಶದಲ್ಲಿ ಜಾತ್ಯತೀತ ರಾಷ್ಟ್ರದ ಅವಶ್ಯಕತೆ ಬೇಡವೆಂದು ಪ್ರತಿಪಾದಿಸಿದಂತಹ ನೀತಿಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಮೊದಲು ಅವರ ನಾಯಕರು ದೇಶದ ಸಮಗ್ರತೆಯ ಬಗ್ಗೆ ಮತ್ತು ದೇಶದ ಸಾರ್ವಭೌಮತೆ ಬಗ್ಗೆ ಕಲಿಯಲಿ ನಂತರ ಕಾಂಗ್ರೆಸ್ ಪಕ್ಷಕ್ಕೆ ಪಾಠ ಹೇಳುವುದನ್ನು ಮಾಡಲಿ.
ಕಾನೂನುಬಾಹಿರವಾಗಿ ನಮ್ಮ ರಾಜ್ಯದಲ್ಲಿ ಯಾರೂ ಅಕ್ರಮ ಚಟುವಟಿಕೆಗಳನ್ನು ಮಾಡಲು ಸಾಧ್ಯವಿರುವುದಿಲ್ಲ. ಅದೇ ಕಾರಣಕ್ಕಾಗಿ ಹಿಂದೆ ದೇಶದಲ್ಲಿ ಹಲವಾರು ಸಂಘಟನೆಗಳು ಸಂಘ ಪರಿವಾರವು ಒಳಗೊಂಡಂತೆ ಅನೇಕ ಸಂದರ್ಭಗಳಲ್ಲಿ ನಿಷೇಧಕ್ಕೆ ಒಳಗಾಗಿರುತ್ತವೆ. ಒಂದು ವೇಳೆ ಸಂಘ ಪರಿವಾರದವರು ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದೇ ಇದ್ದಲ್ಲಿ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಮೊದಲು ಅವರ ಮೇಲಿನ ಆರೋಪಗಳಿಗೆ ತನಿಖೆ ಮಾಡಲು ಸರ್ಕಾರಕ್ಕೆ ಸಹಕಾರ ನೀಡಿ ತಮ್ಮ ಬದ್ಧತೆಯನ್ನು ಮೆರೆಯಲಿ. ಅದೇ ಅವರು ರಾಜ್ಯಕ್ಕೆ ಮತ್ತು ದೇಶಕ್ಕೆ ತೋರುವ ದೇಶಭಕ್ತಿ ಆಗುತ್ತದೆ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದಂತ ರಮೇಶ್ ಬಾಬು ತಿಳಿಸಿದ್ದಾರೆ.
ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ
‘ದೇವಿರಮ್ಮ ಜಾತ್ರಾ ಮಹೋತ್ಸವ’ಕ್ಕೆ ಡೇಟ್ ಫಿಕ್ಸ್: ಭಕ್ತರು ಈ ‘ಮಾರ್ಗಸೂಚಿ ಪಾಲನೆ ಕಡ್ಡಾಯ’