ಬೆಂಗಳೂರು : “ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ನಮ್ಮ ಶಾಲೆಯಲ್ಲಿ ಮಗನಿಗೆ ಸೀಟು ಸಂಬಂಧ ನನ್ನನ್ನು ಭೇಟಿ ಮಾಡಿದ್ದರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸಕ್ಕೆ ವಿಜಯಲಕ್ಷ್ಮಿ ಅವರು ಬಂದ ಕಾರಣ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಉತ್ತರಿಸಿದ ಶಿವಕುಮಾರ್ ಅವರು “ದರ್ಶನ್, ವಿಜಯಲಕ್ಷ್ಮೀ ಪುತ್ರ ಈ ಮೊದಲು ನಮ್ಮ ಶಾಲೆಯಲ್ಲಿ ಓದುತ್ತಿದ್ದರು. ಕಾರಣಾಂತರಗಳಿಂದ ನಮ್ಮ ಶಾಲೆ ತೊರೆದು ಬೇರೆ ಶಾಲೆ ಸೇರಿದ್ದರು. ಈಗ ಮತ್ತೆ ಮರಳಿ ನಮ್ಮ ಶಾಲೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಲು ಬಂದಿದ್ದರು. ನಮ್ಮ ಶಾಲೆಯ ಪ್ರಾಂಶುಪಾಲರು ಪ್ರವೇಶ ಅವಕಾಶ ನಿರಾಕರಿಸಿದ್ದರಿಂದ ನನ್ನ ಬಳಿ ಸೀಟು ಕೇಳಲು ಬಂದಿದ್ದರು” ಎಂದು ಹೇಳಿದರು.
“ಶಾಲೆಯ ದಾಖಲಾತಿಗೆ ಒಂದಷ್ಟು ನಿಯಮಾವಳಿಗಳಿವೆ. ನಾನು ಶಾಲೆಗೆ ಅಷ್ಟಾಗಿ ಭೇಟಿ ನೀಡುತ್ತಿಲ್ಲ. ಶಾಲೆಯ ಆಡಳಿತ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಕ್ಕಳಿಗೆ ವಹಿಸಿದ್ದೇನೆ. ವಿಜಯಲಕ್ಷ್ಮಿ ಅವರು ಮಗನ ಭವಿಷ್ಯದ ದೃಷ್ಟಿಯಿಂದ ಬಂದಿದ್ದರು. ಜತೆಗೆ ನಮ್ಮ ಶಾಲೆಯ ಪಕ್ಕದಲ್ಲೇ ಅವರ ನಿವಾಸವಿದೆ. ನಾನು ಆ ಮಗುವಿಗೆ ಒಳ್ಳೆಯದಾಗಲಿ ಎಂದು ಪ್ರಾಂಶುಪಾರನ್ನು ಭೇಟಿ ಮಾಡಲು ಹೇಳಿದ್ದೇನೆ”ಎಂದರು.
ವಿಜಯಲಕ್ಷ್ಮಿ ಅವರು ನೆರವು ಕೇಳಿದರೆ ಸಹಾಯ ಮಾಡುವಿರಾ ಎಂದಾಗ “ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನನ್ನ ಭೇಟಿ ಮಾಡಲು ಬಂದವರನ್ನು ಬೇಡ ಎಂದು ಹೇಗೆ ನಿರಾಕರಣೆ ಮಾಡಲಿ? ಅಲ್ಲದೇ ನಮ್ಮ ಶಾಲೆಯ ಪಕ್ಕದಲ್ಲೇ ಅವರ ಮನೆಯಿದೆ. ನಮ್ಮ ಲೋಕಸಭಾ ಕ್ಷೇತ್ರದಲ್ಲೇ ಅವರ ಮನೆಯಿದೆ. ನನ್ನನ್ನು ಭೇಟಿ ಮಾಡಲು ನೂರಾರು ಜನ ಬಂದಿದ್ದಾರೆ. ನೀವು (ಮಾಧ್ಯಮದವರು) ಕೂಡ ಬಂದಿದ್ದೀರಿ. ನಿಮ್ಮ ಭೇಟಿಗೆ ನಿರಾಕರಿಸಿದರೆ ಡಿ.ಕೆ. ಶಿವಕುಮಾರ್ ದುರಹಂಕಾರಿ, ಭೇಟಿ ಮಾಡದೆ ತೆರಳಿದರು ಎನ್ನುತ್ತೀರಿ. ಸಾರ್ವಜನಿಕ ಜೀವನದಲ್ಲಿ ಇದ್ದಾಗ ಸಹಾಯ ಕೇಳಿಕೊಂಡು ನನ್ನನ್ನು ಭೇಟಿ ಮಾಡಲು ಬಂದರೆ ಅವರನ್ನು ಭೇಟಿ ಮಾಡಬೇಕಾಗುತ್ತದೆ. ಅದು ನನ್ನ ಕರ್ತವ್ಯ ಕೂಡ” ಎಂದು ಹೇಳಿದರು.
“ಆ ಹೆಣ್ಣುಮಗಳಿಗೆ ತನ್ನ ಮಗನ ಶಿಕ್ಷಣದ ಬಗ್ಗೆ ಕಾಳಜಿಯಿದೆ. ಎಲ್ಲಾ ಮಕ್ಕಳು ಒಂದೇ ಅಲ್ಲವೇ? ಅವರಿಗೆ ಮಗನ ಶಿಕ್ಷಣದ ಬಗ್ಗೆ ಇರುವ ಕಾಳಜಿ ನೋಡಿ ಬಹಳ ಸಂತೋಷವಾಯಿತು. ಬೇರೆ ಶಾಲೆಗೆ ಸೇರಿಸಿದರೆ ಮಾನಸಿಕವಾಗಿ ತೊಂದರೆಯಾಗಬಹುದು. ನಮ್ಮ ಶಾಲೆಗೆ ಸೇರಿಸಿದರೆ ಹತ್ತಿರದಲ್ಲೇ ಇರುವುದರಿಂದ ಹೋಗಿ ಬರಲು ಅನುಕೂಲ ಆಗುತ್ತದೆ. ಈ ಹಿಂದೆ ಪೋಷಕರ ಸಭೆಗೆ ಅವರನ್ನು ಕರೆಸಲಾಗಿತ್ತು. ಆ ವೇಳೆ ದರ್ಶನ್ ಕೂಡ ಬಂದಿದ್ದರು” ಎಂದರು.
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ