ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರ್ಷವರ್ಧನ್ ವಿರುದ್ಧ ನಿನ್ನೆ ಇಒಗೆ ದೂರು ನೀಡಲಾಗಿತ್ತು. ಸರಿಯಾಗಿ ಕರ್ತವ್ಯ ನಿರ್ವಹಿಸದ ಪಿಡಿಒ ವರ್ಗಾವಣೆ ಮಾಡುವಂತೆ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಸೀಮ್ ದೂರು ನೀಡಿದ್ದರು. ಈ ದೂರಿನ ಬಗ್ಗೆ ಪಿಡಿಒ ಹರ್ಷವರ್ಧನ್ ಹೇಳಿದ್ದೇನು ಅಂತ ಮುಂದೆ ಓದಿ.
ಇಂದು ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ಪಿಡಿಒ ಅವರನ್ನು ದೂರಿನ ಸಂಬಂಧ ಕನ್ನಡ ನ್ಯೂಸ್ ನೌ ದೂರವಾಣಿ ಮೂಲಕ ಸಂಪರ್ಕಿಸಿತು. ಪಿಡಿಒ ಹರ್ಷವರ್ಧನ್ ಅವರು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಸೀಮ್ ಮಾಡಿದಂತ ಆರೋಪಗಳನ್ನು ತಳ್ಳಿ ಹಾಕಿದರು. ಮಳೆಗಾಲ ಆಗಿರುವ ಕಾರಣ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಅಡೆತಡೆ ಉಂಟಾಗಿದೆ. ಮಳೆ ಕಡಿಮೆಯಾದ ನಂತ್ರ ಮುಚ್ಚುವುದಾಗಿ ತಿಳಿಸಿದರು.
ಇ-ಸ್ವತ್ತು ಖಾತಾ ವಿಳಂಬ ಧೋರಣೆಯ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ಸೂಕ್ತ ದಾಖಲೆ ನೀಡಿದಂತ ಯಾರಿಗೂ ನೀಡಲು ವಿಳಂಬ ಮಾಡಿಲ್ಲ. ಕೆಲವೊಮ್ಮೆ ತಾಂತ್ರಿಕ ಕಾರಣದಿಂದಾಗಿ ಇ-ಸ್ವತ್ತು ವಿತರಣೆಯಲ್ಲಿ ಸಮಸ್ಯೆಯುಂಟಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ಗ್ರಾಮಸಭೆಗಳಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಯಾವುದೇ ಕೆಲಸ ಮಾಡದಿದ್ದ ಬಗ್ಗೆ ಸರಿಯಾಗಿ ಉತ್ತರಿಸದಂತ ಪಿಡಿಒ ಹರ್ಷವರ್ಧನ್, ಗ್ರಾಮ ಸಭೆಗೆ ಸಮಯಕ್ಕೆ ಸರಿಯಾಗಿ ಹಾಜರಾಗದಿದ್ದಕ್ಕೆ ಕಾರ್ಯದೊತ್ತಡದ ಸಬೂಬು ನೀಡಿದರು.
ಇನ್ನೂ ಮೂರು ತಿಂಗಳಿನಿಂದ ಪಂಚಾಯ್ತಿಯ ಇನ್ ವರ್ಟರ್ ಹಾಳಾಗಿದೆಯಲ್ಲ. ರಿಪೇರಿ ಯಾವಾಗ ಎಂದಾಗ, ಅದು ನಮ್ಮ ಕೈಯಲ್ಲಿ ಇಲ್ಲ. ಸಂಬಂಧಪಟ್ಟಂತ ಕಂಪನಿಗೆ ದೂರು ನೀಡಲಾಗಿದೆ. ಅವರು ಬಂದು ಸರಿ ಮಾಡಬೇಕು ಎಂಬುದಾಗಿ ಉಡಾಫೆಯ ಉತ್ತರ ನೀಡಿದರು.
ಕಚೇರಿ ಸಮಯಕ್ಕೆ ಬರೋದಿಲ್ವಲ್ಲಂತ ಸರ್ ಎಂದಾಗ ಯಾರು ಹೇಳಿದ್ದು? ನಮಗೆ ಯಾವ್ಯಾವೋ ಕೆಲಸ ಇರ್ತಾವೆ. ಅಲ್ಲೆಲ್ಲೇ ಹೋಗಿ ಬರೋದಕ್ಕೆ ಲೇಟ್ ಆಗುತ್ತದೆ. ಎಲ್ಲಾ ದಿನಗಳಲ್ಲಿ ಅಲ್ಲ. ಕೆಲವೊಂದು ದಿನ ಅಷ್ಟೇ ಎಂದರು.
ನೀರಿನ ಮೋಟಾರ್ ನಿರ್ವಹಣೆಯ ಬಿಲ್ ಪಾವತಿಸಿಲ್ಲವೆಂದು ಇಒಗೆ ನೀಡಿದಂತ ದೂರಿನಲ್ಲಿ ದೂರುದಾರರು ದೂರಿದ್ದಾರೆ ಎಂದಾಗ ಅವರು ಬಿಲ್ ಕೊಟ್ಟಿದ್ರೆ ನಾವು ಪಾವತಿ ಮಾಡುತ್ತೇವೆ. ಬಿಲ್ ಕೊಡೋದು ವಿಳಂಬವಾಗಿದ್ದಾಗ ತಡವಾಗಿರುತ್ತದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ಪಿಡಿಒ ಹರ್ಷವರ್ಧನ್ ಅವರು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಸೀಮ್ ಮಾಡಿದಂತ ಆರೋಪಗಳಿಗೆ ಹಾರಿಕೆಯ ಉತ್ತರವನ್ನಷ್ಟೇ ನೀಡಿ, ತಮ್ಮ ಜವಾಬ್ದಾರಿಯಿಂದಲೇ ನುಣಿಚಿಕೊಂಡಂತೆ ಇತ್ತು. ಅವರ ವಿರುದ್ಧದ ಆರೋಪಗಳ ಬಗ್ಗೆ ಸೂಕ್ತ ರೀತಿಯ ತನಿಖೆಯಾದಾಗ ಸತ್ಯಾಸತ್ಯತೆ ಹೊರ ಬರಲಿದೆ. ಆ ಬಗ್ಗೆ ಇಒ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯು ಇಒಗೆ ಸಲ್ಲಿಸಿದ ದೂರಿನಲ್ಲಿ ಏನಿದೆ.?
ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಮಸ್ತ ಗ್ರಾಮಸ್ಥರ ಪರವಾಗಿ ವಿನಂತಿಸಿಕೊಳ್ಳುವುದೇನೆಂದರೆ, ಸದರಿ ಪಂಚಾಯ್ತಿಯ ಹರ್ಷವರ್ಧನ್ ಎಂಬುವವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾಗಿ ಕರ್ತವ್ಯಲೋಪ ಮಾಡುತ್ತಿದ್ದಾರೆ. ಪಿಡಿಒ ವಿರುದ್ಧ ಈ ಕೆಳಕಂಡಂತೆ ಆರೋಪಗಳ ಸುರಿಮಳೆಯನ್ನೇ ಮಾಡಿದ್ದಾರೆ.
1) ಕಸವಿಲೇವಾರಿಗೆ ವಾಹನವಿದ್ದು ಅದರ ನಿರ್ವಹಣೆ ಮಾಡದೇ ಬೇಜವಾಬ್ದಾರಿಯಿಂದ ಸದರಿ ವಾಹನವನ್ನು ಮಳೆಯಲ್ಲೇ ನಿಲ್ಲಿಸಿ, ವಾಹನವನ್ನು ಹಾಳುಗೆಡುವಿರುತ್ತಾರೆ.
2) ಊರಿನ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ.
3) ಆಸ್ಪತ್ರೆ ರಸ್ತೆಯಲ್ಲಿ ಹೊಂಡ-ಗುಂಡಿಗಳಿದ್ದರೂ ಮುಚ್ಚದೇ ಬೀಜವಾಬ್ದಾರಿ ತೋರುತ್ತಿದ್ದಾರೆ.
4) ಇ-ಸ್ವತ್ತು ರಾತಾಗಳು ಸರಿಯಾದ ಸಮಯಕ್ಕೆ ಮಾಡದೇ ವಿಳಂಬ ಧೋರಣಿ ಅನುಸರಿಸುತ್ತಿದ್ದಾರೆ.
5) ಮಳೆಗಾಲದಲ್ಲಿ ಚರಂಡಿ ಸುವ್ಯವಸ್ಥೆ ಕಾಪಾಡದೇ ಚರಂಡಿ ನೀರು ರಸ್ತೆಗೆ ಹರಿದು ರಸ್ತೆಗಳು ಹಾಗುತ್ತಿವೆ.
6) ಗ್ರಾಮಸಭೆಗಳಲ್ಲ ನಿರ್ಣಯಗೊಂಡ ಗ್ರಾಮಸ್ಥರ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ ಬೇಜವಾಬ್ದಾರಿ ತೋರುತ್ತಿದ್ದಾರೆ.
7) ಗ್ರಾಮ ಸಭೆಗಳನ್ನು ಸರಿಯಾದ ಸಮಯಕ್ಕೆ ನಡೆಸುತ್ತಿಲ್ಲ.
8) ಮೂರು ತಿಂಗಳನಿಂದ ಪಂಚಾಯ್ತಿಯ ಇನ್‌ವರ್ಟರ್ ಹಾಳಾಗಿದ್ದರೂ ಸರಿಮಾಡದೇ ಹಾಗೇ ಇರಿಸಿ ತಮ್ಮ ಕೆಲಸದಲ್ಲಿ ವಿಳಂಬ ಮಾಡುತ್ತಿದ್ದಾರೆ.
9) ಇವರು ಕಛೇರಿಗೆ ಸರಿಯಾದ ಸಮಯಕ್ಕೆ ಹಾಜರಾಗದೇ ಮನಸ್ಸಿಗೆ ಬಂದ ಹಾಗೆ ಬಂದು ಹೋಗುತ್ತಿದ್ದಾರೆ.
10) ಸಾಮಾನ್ಯ ಸಭೆಯಲ್ಲಿ ನಿರ್ಣಯಗೊಂಡ ಕೆಲಸ ಕಾರ್ಯಗಳು ನಡೆಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ.
11) ಸಾಮಾನ್ಯ ಸಭೆಯ ನಿರ್ಣಯದಂತೆ ಕುಡಿಯುವ ನೀರಿನ ಮೋಟಾರ್ ನಿರ್ವಹಣಿಯ ಬಲ್ ಪಾವತಿಸಿರುವುದಿಲ್ಲ.
ಈ ರೀತಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಆದ್ದರಿಂದ ನಮ್ಮ ಪಂಚಾಯ್ತಿಯ ಹಿತದೃಷ್ಟಿಯಿಂದ ಸದರಿಯವರನ್ನು ಈ ಕೂಡಲೇ 15 ದಿನಗಳ ಒಳಗಾಗಿ ವಗಾವಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ತಾವುಗಳು ವರ್ಗಾವಣೆ ಮಾಡದಿದ್ದಲ್ಲಿ ತಮ್ಮ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಿರುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಸಾಗರ ತಾಲ್ಲೂಕು ಇಒ ಗುರುಕೃಪ ಶಣೈಗೆ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಸೀಮ್ ಉಳ್ಳೂರು, ತಾಲ್ಲೂಕು ಮಹಿಳಾ ಅಧ್ಯಕ್ಷೆ ಪಾರ್ವತಮ್ಮ, ರಾಘವೇಂದ್ರ, ಆಸೀಫ್, ಪ್ರಶಾಂತ್, ಬಸವರಾಜ್, ಮೋಹನ್ ಜೊತೆಗೂಡಿ ದೂರು ನೀಡಿದ್ದಾರೆ. ಈ ದೂರು ಪಡೆದಿರುವಂತ ಇಒ ಅವರು ಉಳ್ಳೂರು ಗ್ರಾಮ ಪಂಚಾಯ್ತಿ ಪಿಡಿಒ ಹರ್ಷವರ್ಧನ್ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
‘ಇನ್ಸ್ ಸ್ಟಾಗ್ರಾಮ್’ನಲ್ಲಿ ಲವ್..! ಪ್ರಿಯತಮೆ ಹುಡುಕಿಕೊಂಡು ಬಂದ ಯುವಕನಿಗೆ ಶಾಕ್!
ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಯಶಸ್ವಿ: ಸಿಎಂ ಸಿದ್ದರಾಮಯ್ಯ