ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ವಿಷಯವನ್ನು ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಶಿಸ್ತು ಕ್ರಮ ಕೈಗೊಳ್ಳಬೇಕೇ ಅಥವಾ ಹೀಗೇ ಸುಮ್ಮನೇ ಬಿಡಬೇಕೇ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ವಿರುದ್ಧ ಮಾತ್ರ ಶಿಸ್ತು ಕ್ರಮವೇ ಅಥವಾ ಅವರ ಸುತ್ತ ಇರುವವರ ಬಗ್ಗೆ ಕ್ರಮ ಆಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದರು.
ಸಂಘಟನಾ ಪರ್ವದ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಕರ್ನಾಟಕದ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಕೇಂದ್ರದ ಮಾಜಿ ಸಚಿವ ರಾಧಾಕೃಷ್ಣನ್ ಅವರು ಬೆಂಗಳೂರಿಗೆ ಬಂದು ಬೆಳಿಗ್ಗೆಯಿಂದ ಸುಮಾರು 4ರಿಂದ 4.30 ತಾಸುಗಳ ಕಾಲ ಸಕ್ರಿಯ ಸದಸ್ಯತ್ವ ಮುಂದುವರಿಕೆ, ಬೂತ್ ಸಮಿತಿಗಳ ರಚನೆ, ಮಂಡಲ ಸಮಿತಿಗಳ ರಚನೆ ಕುರಿತು ಸಮಗ್ರವಾಗಿ ಚರ್ಚೆ ಮಾಡಿದ್ದಾರೆ; ‘ಸಂಘಟನಾ ಪರ್ವ’ ಯಶಸ್ಸಿಗೆ ಸಂಬಂಧಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಕೋರ್ ಕಮಿಟಿ ಸಭೆಯೂ ನಡೆದಿದೆ. ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನೂ ನೀಡಿದ್ದಾರೆ ಎಂದು ವಿವರಿಸಿದರು. ಜಿಲ್ಲಾಧ್ಯಕ್ಷರು ಮತ್ತು ರಾಜ್ಯದ ಪದಾಧಿಕಾರಿಗಳು ಇವೆಲ್ಲವನ್ನೂ ಗಮನಿಸಿ ಸಂಘಟನೆ ಗಟ್ಟಿಗೊಳಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಹೇಳಿದರು. ಜಿಲ್ಲಾಧ್ಯಕ್ಷರು ರಾಷ್ಟ್ರೀಯ ನಾಯಕರಿಗೆ ಯಾವುದೇ ಮನವಿ ನೀಡಿಲ್ಲ; ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದು ಅವರು ಪ್ರಶ್ನೆಗೆ ನಗುತ್ತ ಉತ್ತರ ನೀಡಿದರು.
ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಸದಸ್ಯತ್ವದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನವನ್ನು ರಾಜ್ಯ ಪಡೆದು ಸಾಧನೆ ಮಾಡಿದೆ ಎಂದರಲ್ಲದೆ, ಕರ್ನಾಟಕದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿದೆ. 74 ಲಕ್ಷ ಸದಸ್ಯತ್ವ ಮಾಡಿದ್ದು, ಇನ್ನಷ್ಟು ಸದಸ್ಯತ್ವ ಮಾಡಲು ಅವಕಾಶವಿದೆ ಎಂದು ಕೇಂದ್ರದ ಮುಖಂಡರು ತಿಳಿಸಿದ್ದಾರೆ ಎಂದರು.
ಪಕ್ಷದ ಸಣ್ಣಪುಟ್ಟ ವಿಚಾರಗಳು ಇನ್ನು ಮೂರ್ನಾಲ್ಕು ದಿನಗಳಲ್ಲಿ ಸುಖಾಂತ್ಯ ಆಗಲಿದೆ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಪಕ್ಷದಲ್ಲಿ ನಾವೆಲ್ಲ ಒಟ್ಟಾಗಿದ್ದೇವೆ; ಒಟ್ಟಾಗಿ ಹೋಗಲಿದ್ದೇವೆ ಎಂದು ಸ್ಪಷ್ಟಪಡಿಸಿದರು. ಕೇಂದ್ರದ ನಾಯಕರಿಗೆ ಸಮಸ್ಯೆಗಳನ್ನು ಸರಿಪಡಿಸುವ ಶಕ್ತಿ ಇದೆ. ಅದನ್ನು ಮಾಡುತ್ತಾರೆ. ಈಗ ಚುನಾವಣೆ ಇಲ್ಲ; ನಮಗೂ ತಾಳ್ಮೆ ಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿ, ಪಕ್ಷದ ಘನತೆಗೆ ಹಾನಿ ಮಾಡುವ ಕೆಲಸವನ್ನು ಯಾರೂ ಮಾಡಬಾರದು. ಬಹಿರಂಗವಾಗಿ ಪಕ್ಷದ ಅಧ್ಯಕ್ಷರು, ಪಕ್ಷವನ್ನು ಟೀಕಿಸುವುದು, ಹಿರಿಯರನ್ನು ಟೀಕಿಸಿದರೆ ಪಕ್ಷಕ್ಕೆ ಹೊಡೆತ ಬೀಳುತ್ತದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಪಕ್ಷವು ರಾಜ್ಯದಲ್ಲಿ ಈಚೆಗೆ ಸಾಕಷ್ಟು ಹೋರಾಟಗಳನ್ನು ಮಾಡಿ ಉತ್ತಮ ಇಮೇಜ್ ಸಂಪಾದಿಸಿತ್ತು. ಕೆಲವರ ಹೇಳಿಕೆ, ಮಾತಿನಿಂದಾಗಿ ದೊಡ್ಡ ಹೊಡೆತ ಅನುಭವಿಸಬೇಕಾದ ಪರಿಸ್ಥಿತಿಗೆ ಬಂದಿದೆ ಎಂದು ತಿಳಿಸಿದರು. ಇದಕ್ಕೆ ಅವಕಾಶ ಕೊಡಬಾರದು; ಅವರನ್ನು ಕರೆದು ಮಾತನಾಡಬೇಕು. ಅದಕ್ಕೂ ಕೇಳದೆ ಸೆಡ್ಡು ಹೊಡೆದರೆ ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ನಾನು ಸೇರಿದಂತೆ ಎಲ್ಲ ಹಿರಿಯರು, ಶಾಸಕರು ಅಭಿಪ್ರಾಯ ತಿಳಿಸಿದ್ದಾಗಿ ವಿವರ ನೀಡಿದರು.
ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ. ಬಹಳ ಕಡಿಮೆ ಅವಧಿಯಲ್ಲಿ ಸಮಸ್ಯೆ ಸರಿ ಆಗುವುದಾಗಿ ಭಾವಿಸುತ್ತೇನೆ ಎಂದು ತಿಳಿಸಿದರು.
BREAKING: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ