ಬೆಂಗಳೂರು: ಯಲಹಂಕದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ‘ಸರ್ಕಾರ ನಿಮ್ಮ ಮನೆ ಬಾಗಿಲಿಗೆ’ ಕುಂದುಕೊರತೆ ಪರಿಹಾರ ಸಭೆಯಲ್ಲಿ ಯಲಹಂಕ, ದಾಸರಹಳ್ಳಿ ಮತ್ತು ಬ್ಯಾಟರಾಯನಪುರ ಕ್ಷೇತ್ರದ ನಿವಾಸಿಗಳು 2,600 ಅರ್ಜಿಗಳನ್ನು ಸಲ್ಲಿಸಿದರು.
ಲಂಚದ ಬೇಡಿಕೆಗಳ ಬಗ್ಗೆ ಹಿಂಜರಿಕೆಯಿಲ್ಲದೆ ವರದಿ ಮಾಡುವಂತೆ ಡಿಕೆ ಶಿವಕುಮಾರ್ ಹೇಳಿದರು, ಲಂಚ ಹೆಚ್ಚುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಭರವಸೆ ನೀಡಿದರು.ಯಾರೇ ಲಂಚ ಕೇಳಿದರೂ ನಿರ್ದಾಕ್ಷಿಣ್ಯವಾಗಿ ದೂರು ಕೊಡಿ.ಕ್ರಮ ಕೈಗೊಳ್ಳುತ್ತೇವೆ.ಅಧಿಕಾರಿಗಳು ಗೌರವ ಕೊಡದೇ ಇದ್ದಾಗ,ಲಂಚ ಕೇಳಿದಾಗ ಜನ ಸಾಮಾನ್ಯರು ರಾಜಕಾರಣಿಗಳ ಹತ್ತಿರ ಬರುತ್ತಾರೆ.ಇತ್ತೀಚೆಗೆ ಈ ದೂರುಗಳ ಸಂಖ್ಯೆ ಜಾಸ್ತಿಯಾಗಿದೆ.ಈ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಸಚಿವರು, ಶಾಸಕರು,ಪೊಲೀಸರು, ಕಂದಾಯ ಅಧಿಕಾರಿಗಳು ಯಾರ ಹೆಸರಿನಲ್ಲಿ ಲಂಚ ಕೇಳಿದರೂ ಮುಲಾಜಿಲ್ಲದೆ ದೂರು ಕೊಡಿ .ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ತ್ಯಾಜ್ಯ ಸುರಿಯುವವರನ್ನು ಗುರುತಿಸಲು ಮತ್ತು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ನಗರದಾದ್ಯಂತ ಕ್ಯಾಮೆರಾಗಳನ್ನು ಅಳವಡಿಸಲು ಸರ್ಕಾರ ಯೋಜಿಸಿದೆ ಎಂದು ಅವರು ಹೇಳಿದರು.