ಶಿವಮೊಗ್ಗ: ಸಾಗರದಲ್ಲಿ ಅಕ್ಟೋಬರ್.18 ಮತ್ತು 19ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಾಧನ ಮಲ್ಟಿ ಜಿಮ್ ಗೌರವ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಾಗರದಲ್ಲಿ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅಕ್ಟೋಬರ್.18, 19ರಂದು ಸಾಗರದ ಒಕ್ಕಲಿಗರ ಭವನದಲ್ಲಿ ನಡೆಯಲಿದೆ ಎಂದರು.
ಪವರ್ ಲಿಫ್ಟಿಂಗ್ ನಿಂದ ಅನೇಕ ಆರೋಗ್ಯ ಪ್ರಯೋಜನಗಳು ಇದ್ದಾವೆ. ಇದರಲ್ಲಿ ಸಾಧನೆ ಮಾಡಿದಂತ ಅನೇಕರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಯುವ ಜನತೆ ಪವರ್ ಲಿಫ್ಟಿಂಗ್ ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಧನ ಮಲ್ಟಿ ಜಿಮ್ ವ್ಯವಸ್ಥಾಪಕ ರಮೇಶ್. ಎನ್ ಮಾತನಾಡಿ, ಸಾಧನ ಮಲ್ಟಿ ಜಿಮ್, ಸಾಗರ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಭದ್ರಾವತಿಯ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ನನ್ನ ತಾಯಿ ದಿವಂಗತ ರುಕ್ಷ್ಮಿಣಿ ಅವರ ಸ್ಮರಣಾರ್ಥವಾಗಿ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹಿಳಾ ಮತ್ತು ಪುರುಷ ವಿಭಾಗಗಳಲ್ಲಿ ನಡೆಸಲಾಗುತ್ತಿದೆ. ಸಬ್ ಜ್ಯೂನಿಯರ್ 13 ರಿಂದ 18 ವರ್ಷದವರು, ಜ್ಯೂನಿಯರ್ 18 ರಿಂದ 23 ವರ್ಷದವರು, ಸೀನಿಯರ್ 23 ರಿಂದ 40 ವರ್ಷದವರು, ಮಾಸ್ಟರ್ 40 ರಿಂದ 51 ವಯೋಮಾನದವರು ಸ್ಪರ್ಧಿಸಲಿದ್ದಾರೆ. 150ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಗೆದ್ದ ಸ್ಪರ್ಧಾಳುಗಳಿಗೆ ಆಕರ್ಷಕ ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಾಧನ ಮಲ್ಟಿ ಜಿಮ್ ಜಂಟಿ ಕಾರ್ಯದರ್ಶಿ ಕೆ.ಭಾಸ್ಕರ್, ಸಂಯೋಜಕ ಎ.ಶಶಿ, ರಾಷ್ಟ್ರೀಯ ಕ್ರೀಡಾಪಟು ಸಲೀಮ್, ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಪುಷ್ಪ ರಮೇಶ್ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು