ರಾಮನಗರ : ಆಗಸ್ಟ್ ತಿಂಗಳೊಳಗೆ ಎಲ್ಲಾ ಕಡೆ ಸ್ಮಾರ್ಟ್ ಮೀಟರ್ ಅಳವಡಿಸುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದರಿಂದ ರಾಜ್ಯಕ್ಕೆ ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ ಡಿಎಸ್ಎಸ್) ವಿಸ್ತರಿಸುವ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಆಗಸ್ಟ್ ತಿಂಗಳೊಳಗೆ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಕಟ್ಟರ್ ಅವರು ಸೂಚಿಸಿದ್ದಾರೆ. ಈ ಹಿಂದೆ ಆರ್ ಡಿಎಸ್ ಯೋಜನೆಯಡಿ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರತಿ ಮೀಟರ್ ಗೆ 900 ರೂ. ಸಬ್ಸಿಡಿ ನೀಡುತ್ತಿತ್ತು. ಆದರೆ, ಈಗ ಆ ಯೋಜನೆ ಿಲ್ಲ. ಹೀಗಾಗಿ ಆರ್ ಡಿಎಸ್ ಯೋಜನೆ ವಿಸ್ತರಿಸುವಂತೆ ಕೇಂದ್ರ ಸಚಿವರನ್ನು ಮನವಿ ಮಾಡಿದ್ದೆ. ದೆಹಲಿಗೆ ಬಂದರೆ ಈ ಕುರಿತು ಚರ್ಚಿಸೋಣ ಎಂದಿದ್ದರು. ಅದರಂತೆ ಶೀಘ್ರವೇ ದೆಹಲಿಗೆ ತೆರಳಿ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ”, ಎಂದು ತಿಳಿಸಿದರು.
“ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ 2021-22ನೇ ಸಾಲಿನಲ್ಲಿ ಸೂಚಿಸಿತ್ತು. ಅದಕ್ಕೆ ಪೂರಕವಾಗಿ ಆರ್ ಡಿಎಸ್ ಯೋಜನೆ ಜಾರಿಗೊಳಿಸಿತ್ತು. ಆದರೆ, ರಾಜ್ಯ ಸರ್ಕಾರಗಳು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಾಕಿ ಇರುವ ಸಬ್ಸಿಡಿ, ಇತರೆ ಬಾಕಿಗಳನ್ನು ಪಾವತಿಸಿದರೆ ಮಾತ್ರ ಯೋಜನೆಯ ಅನುಕೂಲ ಪಡೆದುಕೊಳ್ಳಬಹುದು ಎಂದು ಹೇಳಿತ್ತು.ಹೀಗಾಗಿ ರಾಜ್ಯ ಸರ್ಕಾರ ಈ ಯೋಜನೆ ಒಪ್ಪಿಕೊಂಡಿರಲಿಲ್ಲ. ಇದೀಗ ಷರತ್ತುಗಳಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು”, ಎಂದರು.
“ಪ್ರಸ್ತುತ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದಂತೆ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಹಾಲಿ ಸಂಪರ್ಕಗಳಿಗೆ ಐಚ್ಛಿಕಗೊಳಿಸಲಾಗಿದೆ. ಬೇಕಿದ್ದವರು ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬಹುದು,” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
GOOD NEWS: ಕೃಷಿ ಪಂಪ್ ಸೆಟ್ ಸಕ್ರಮ ನಿರೀಕ್ಷೆಯಲ್ಲಿದ್ದ ರೈತರಿಗೆ ಸಚಿವ ಕೆ.ಜೆ ಜಾರ್ಜ್ ಗುಡ್ ನ್ಯೂಸ್
BREAKING: ಮರ ಬಿದ್ದು ಸೊರಬ-ಸಾಗರ ರಸ್ತೆ ಸಂಚಾರ ಬಂದ್: ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ