ಬೆಂಗಳೂರು : ಆನೆ- ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಆನೆ ವಿಹಾರಧಾಮ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ವನ್ಯಜೀವಿ-ಮಾನವ ಸಂಘರ್ಷ ಹಾಗೂ ರೈಲ್ವೆ ಬ್ಯಾರಿಕೇಡ್ ಯೋಜನೆಗಳನ್ನು ಅಂತಿಮಗೊಳಿಸುವ ಸಂಬಂಧ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಚಿಕ್ಕಮಗಳೂರಿನ ಮುತ್ತೋಡಿಗಿಂತಲೂ ತಣಿಗೆಬೈಲು ಸೂಕ್ತ ಪ್ರದೇಶ ಎಂದು ತಜ್ಞರು ವರದಿ ನೀಡಿದ್ದು, ಈ ಕುರಿತಂತೆ ಸ್ಥಳೀಯರ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ಆನೆಗಳ ಸಮಸ್ಯೆ ಯಾವ ವಲಯದಲ್ಲಿ ಹೆಚ್ಚಾಗಿದೆ. ಆನೆಗಳ ದಾಳಿ ನಡೆಯುತ್ತಿರುವ ಸಮಯ, ಕಾರಣ ಕುರಿತಂತೆ ಅಧ್ಯಯನ ನಡೆಸಿ, ಸ್ಥಳೀಯರಿಗೆ ಮುನ್ನಚ್ಚರಿಕೆ ನೀಡಬೇಕು ಎಂದ ಸಚಿವರು, ಆನೆ ಧಾಮ ಬಹುಪಾಲು ಆನೆ-ಮಾನವ ಸಂಘರ್ಷ ತಗ್ಗಿಸುವ ಭರವಸೆ ಇದೆ, ಮುಂದಿನ ವಾರ ತಾವು ದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರನ್ನು ಭೇಟಿ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಆನೆ ವಿಹಾರ ಧಾಮ ಕುರಿತಂತೆ ಸಮಗ್ರವಾಗಿ ಚರ್ಚಿಸಲಾಗುವುದು, ಕಾಂಪಾದಿಂದ ಹಣ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ಸಚಿವರು ತಿಳಿಸಿದರು.
ಕಮಾಂಡ್ ಕೇಂದ್ರ :
ವನ್ಯಜೀವಿ -ಮಾನವ ಸಂಘರ್ಷ ತಡೆಗೆ ಸಮಗ್ರ ಕಮಾಂಡ್ ಸೆಂಟರ್ ಸ್ಥಾಪಿಸಲು ತಾವು ಸೂಚನೆ ನೀಡಿದ್ದರೂ, ವಿಳಂಬವಾಗುತ್ತಿದೆ. ಕೂಡಲೇ ಈ ಬಗ್ಗೆ ಕಾರ್ಯಯೋಜನೆ ರೂಪಿಸಿ, ಆನೆ ಸೇರಿದಂತೆ ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಟ್ಟು ಸ್ಥಳೀಯರಿಗೆ ಕಾಲ ಕಾಲಕ್ಕೆ ಮುನ್ನೆಚ್ಚರಿಕೆ ನೀಡಲು ಮತ್ತು ವನ್ಯಮೃಗಗಳು ನಾಡಿಗೆ ಬಂದಿರುವ ಬಗ್ಗೆ ಸ್ವೀಕರಿಸುವ ದೂರಿಗೆ ತತ್ ಕ್ಷಣವೇ ಸ್ಪಂದಿಸಲಾಗಿದೆಯೇ ಇಲ್ಲವೇ ಎಂಬುದನ್ನು ಕೇಂದ್ರ ಸ್ಥಾನದಲ್ಲಿ ಕುಳಿತು ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ರೂಪಿಸುವಂತೆ ತಿಳಿಸಿದರು.
ಸನ್ನಾ, ಲಂಟಾನ ಸಮಸ್ಯೆ ಪರಿಹರಿಸಿ:
ಸನ್ನಾ ಮತ್ತು ಲಂಟಾನ ಕಳೆಗಳು ವಿಪರೀತವಾಗಿ ಕಾಡನ್ನು ಆವರಿಸುತ್ತಿವೆ. ನೆರೆಯ ತಮಿಳುನಾಡು ಮತ್ತು ಕೇರಳದಲ್ಲಿ ಇದನ್ನು ಹೇಗೆ ನಿರ್ವಹಿಸಲಾಗಿದೆ ಎಂಬ ಮಾಹಿತಿ ಪಡೆದು, ದೊಡ್ಡ ಪ್ರಮಾಣದಲ್ಲಿ ಈ ಕಳೆ ನಾಶಕ್ಕೆ ಕ್ರಮ ಕೈಗೊಳ್ಳಿ ಎಂದು ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೀನಾಕ್ಷಿ ನೇಗಿ ಮತ್ತು ಪಿ.ಸಿ. ರೇ ಹಾಗೂ ಆನೆ ಸಂಘರ್ಷ ಇರುವ ವಲಯಗಳ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.
ಶಿವಮೊಗ್ಗ: ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ‘ನಾಗೋಡಿ ವಿಶ್ವನಾಥ್’ ನೇಮಕ