ಬೆಂಗಳೂರು: 2025 ರ ಐಪಿಎಲ್ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಮೆರವಣಿಗೆಯನ್ನು ಬೆಂಗಳೂರಿನಲ್ಲಿ ರದ್ದುಗೊಳಿಸಲಾಗಿದೆ.
18 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಪ್ರೀತಿ ಜಿಂಟಾ ಅವರ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮವಾಗಿ ಜಿಂಕ್ಸ್ ಅನ್ನು ಮುರಿದು ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಿತು. ಈ ತಂಡವನ್ನು ಬೆಂಗಳೂರಲ್ಲಿ ತೆರೆದ ವಾಹನದಲ್ಲಿ ಮೆರೆವಣಿ ಮಾಡುವ ಮೂಲಕ ವಿಜಯೋತ್ಸವ ಆಚರಿಸಲು ಸರ್ಕಾರ ತೀರ್ಮಾನಿಸಿತ್ತು.
ಆದರೇ ಇದರಿಂದ ಬೆಂಗಳೂರಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಆರ್ ಸಿ ಬಿ ಆಟಗಾರರ ಭದ್ರತೆಯ ದೃಷ್ಠಿಯಿಂದಲೂ ಇದು ಸರಿಯಾದ ನಿರ್ಧಾರವಲ್ಲ ಎಂಬುದಾಗಿ ಪೊಲೀಸರು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಆರ್ ಸಿಬಿ ತಂಡದ ವಿಜಯೋತ್ಸವ ಮೆರವಣಿಗೆ ರದ್ದುಗೊಳಿಸಲಾಗಿದೆ. ಇದರ ಬದಲಾಗಿ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಆರ್ ಸಿ ಬಿ ಆಟಗಾರರನ್ನು ಅಭಿನಂದಿಸುವಂತ ಸಮಾರಂಭವನ್ನು ಸರ್ಕಾರ ಆಯೋಜಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಇಂದು ಸಂಜೆ 4 ಗಂಟೆಗೆ ಆರ್ ಸಿ ಬಿ ಆಟಗಾರರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳಲ್ಲಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಸನ್ಮಾನಿಸಲಿದ್ದಾರೆ. ಸಮಾರಂಭದ ನಂತರ, ಸಿಎಂ ಪ್ರತಿಯೊಬ್ಬ ಆಟಗಾರರನ್ನು ವೈಯಕ್ತಿಕವಾಗಿ ಅಭಿನಂದಿಸುತ್ತಾರೆ. ಇಡೀ ಕಾರ್ಯಕ್ರಮವು 45 ನಿಮಿಷದಿಂದ 1 ಗಂಟೆಯವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರು ಅಭಿನಂದನಾ ಸಮಾರಂಭದ ಸಮಯದಲ್ಲಿ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಮಾರ್ಗಗಳನ್ನು ತಪ್ಪಿಸುವಂತೆ ಪ್ರಯಾಣಿಕರನ್ನು ಕೇಳಿಕೊಂಡಿದ್ದಾರೆ. ವಿಜಯೋತ್ಸವ ಮೆರವಣಿಗೆ ಇರುವುದಿಲ್ಲ. ಸೀಮಿತ ಪಾರ್ಕಿಂಗ್ ಸ್ಥಳವಿದೆ, ಆದ್ದರಿಂದ ಜನರು ಮೆಟ್ರೋ ಅಥವಾ ಇತರ ಸಾರ್ವಜನಿಕ ಸಾರಿಗೆಯನ್ನು ಬಳಸಲು ಸೂಚಿಸಲಾಗಿದೆ ಎಂದು ಅದು ಹೇಳಿದೆ.
ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಬೃಹತ್ ಮೆಟ್ಟಿಲಿನ ಮೇಲೆ RCB ಆಟಗಾರರಿಗೆ ಸನ್ಮಾನ: ಪರಮೇಶ್ವರ್