ಉಜ್ಬೇಕಿಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಸೀನಿಯರ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ದೀಪಾ ಕರ್ಮಾಕರ್ ಪಾತ್ರರಾಗಿದ್ದಾರೆ. ಅವರು ಚಾಂಪಿಯನ್ ಶಿಪ್ ನಲ್ಲಿ ಮಹಿಳಾ ವಾಲ್ಟ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು.
ಈ ಹಿಂದೆ 2015ರ ಆವೃತ್ತಿಯಲ್ಲಿ ದೀಪಾ ಇದೇ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ವಾಲ್ಟ್ ಫೈನಲ್ ನಲ್ಲಿ ಅವರು ನಾಲ್ಕನೇ ಸ್ಥಾನ ಪಡೆದರು.
ಆಶಿಶ್ ಕುಮಾರ್ 2015 ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ವೈಯಕ್ತಿಕ ಫ್ಲೋರ್ ವ್ಯಾಯಾಮದಲ್ಲಿ ಕಂಚಿನ ಪದಕ ಗೆದ್ದರೆ, ಪ್ರಣತಿ ನಾಯಕ್ 2019 ಮತ್ತು 2022 ರ ಆವೃತ್ತಿಗಳಲ್ಲಿ ವಾಲ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.
ಡೋಪಿಂಗ್ ಅಪರಾಧಕ್ಕಾಗಿ 21 ತಿಂಗಳ ಅಮಾನತು ನಂತರ ಕಳೆದ ವರ್ಷ ಆಟಕ್ಕೆ ಮರಳಿದ ದೀಪಾ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಸ್ಪರ್ಧಿಸುತ್ತಿಲ್ಲ.
ತಾಷ್ಕೆಂಟ್ನಲ್ಲಿ ನಡೆದ ಸ್ಪರ್ಧೆಗಳ ಕೊನೆಯ ದಿನದಂದು ವಾಲ್ಟ್ ಫೈನಲ್ನಲ್ಲಿ ಕರ್ಮಾಕರ್ ಸರಾಸರಿ 13.566 ಅಂಕಗಳನ್ನು ಗಳಿಸಿದರು. ಉತ್ತರ ಕೊರಿಯಾದ ಕಿಮ್ ಸನ್ ಹ್ಯಾಂಗ್ (13.466) ಮತ್ತು ಜೋ ಕ್ಯೋಂಗ್ ಬ್ಯೋಲ್ (12.966) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.