ಶಿವಮೊಗ್ಗ: ಜಿಲ್ಲಾ ಮಟ್ಟದ ಸಂಘಟನೆಯಾಗಿರುವಂತ ಸಾಗರದ ಹೆಚ್.ಗಣಪತಿಯಪ್ಪ ರೈತ ಸಂಘವನ್ನು ರಾಜ್ಯ ಮಟ್ಟದ ಸಂಘಟನೆಯಾಗಿ ಪರಿವರ್ತಿಸಲಾಗುತ್ತಿದೆ. ಈ ಸಂಘವನ್ನು ಕರ್ನಾಟಕ ರಾಜ್ಯ ರೈತ ಸಂಘದ ಜೊತೆಗೆ ಸೇರ್ಪಡೆಗೊಳಿಸುತ್ತಿರುವುದಾಗಿ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದ್ದಾರೆ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರದ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘವನ್ನು ರಾಜ್ಯ ಮಟ್ಟದ ಸಂಘಟನೆಯೊಂದಿಗೆ ಸೇರ್ಪಡೆಗೊಳಿಸುವ ಬಗ್ಗೆ ಈಗಾಗಲೇ ಎರಡು ಮೂರು ಸುತ್ತಿನ ಮಾತುಕತೆಯಾಗಿದೆ. ನಮ್ಮ ಸಂಘದ ಪದಾಧಿಕಾರಿಗಳು, ಸದಸ್ಯರ ಜೊತೆಗೂ ಈಗಾಗಲೇ ಸಭೆ ನಡೆಸಿ, ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 6 – 7 ವರ್ಷಗಳಿಂದ ಸಾಗರದಲ್ಲಿ ಹೆಚ್.ಗಣಪತಿಯಪ್ಪ ಸಾಗರ ತಾಲ್ಲೂಕು ರೈತ ಸಂಘಟನೆಯು ರೈತರ ಪರ ಹೋರಾಟ ನಡೆಸಿಕೊಂಡು ಬಂದಿದೆ. ಮುಂದೆಯೂ ಇದು ಮುಂದುವರೆಯಲಿದೆ. ಜಿಲ್ಲಾ ಮಟ್ಟದ ಸಂಘಟನೆಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಸಾಗರ ತಾಲ್ಲೂಕು ಸಂಘವಾಗಿ ಶುರುವಾದಂತ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘವು ಜಿಲ್ಲಾ ಹಂತಕ್ಕೂ ವಿಸ್ತರಿಸಿದೆ. ರೈತರ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿಯಾಗಿ ಹೋರಾಟ ನಡೆಸಲು ರಾಜ್ಯ ಮಟ್ಟದ ಸಂಘಟನೆಯೊಂದಿಗೆ ಕೈ ಜೋಡಿಸಲಾಗುತ್ತಿದೆ. ಸುಮಾರು 15 ರಿಂದ 20 ರಾಜ್ಯದ ವಿವಿಧ ರೈತ ಸಂಘಟನೆಗಳು ಚಿನ್ನಪ್ಪ ಪೂಜಾರ್ ರಾಜ್ಯಾಧ್ಯಕ್ಷರಾಗಿರುವಂತ ಕರ್ನಾಟಕ ರಾಜ್ಯ ರೈತ ಸಂಘಟನೆಯೊಂದಿಗೆ ಒಟ್ಟಾಗುತ್ತಿರುವುದಾಗಿ ಹೇಳಿದರು.
ಡಿಸೆಂಬರ್.9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳುತ್ತಿದೆ. ಈ ಅಧಿವೇಶನದಲ್ಲಿ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎನ್ನುವ ಆಗ್ರಹ ನಮ್ಮದಾಗಿದೆ. ರಾಜ್ಯದ ರೈತರ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆಗೂ ಬೆಳಗಾವಿಯ ಸುವರ್ಣ ಸೌಧದ ಬಳಿ ನಡೆಸಲು ನಿರ್ಧರಿಸಲಾಗಿದೆ. ಒಂದು ಲಕ್ಷದಷ್ಟು ರೈತರು ಒಟ್ಟಾಗಿ ಸೇರುವ ನಿರೀಕ್ಷೆಯಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ತೀವ್ರ ಮಳೆಯ ಕಾರಣ ಕೊಳೆ ರೋಗದಿಂದ ಅಡಿಕೆ ಹಾಳಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಪರಿಹಾರ ಕೊಡಿಸಬೇಕಿದ್ದಂತ ಜಿಲ್ಲಾ ಮಂತ್ರಿಗಳೇ ಗಮನವಹಿಸುತ್ತಿಲ್ಲ. ಸಾಗರ ತಾಲ್ಲೂಕು ಶಾಸಕರು ರೈತರ ಈ ಕಷ್ಟ ನಿವಾರಿಸುವ ಕೆಲಸ ಮಾಡುತ್ತಿಲ್ಲ. ಈ ಎಲ್ಲಾ ಕಾರಣದಿಂದ ಬೆಳಗಾವಿಯಲ್ಲಿ ನಡೆಯುವಂತ ಚಳಿಗಾಲದ ವಿಧಾನ ಮಂಡಲದ ಅಧಿವೇಶನದ ವೇಳೆಯಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ ಮಂಡ್ಯ ಜಿಲ್ಲೆಯ ರೈತರಿಗೆ ನಾಲೆಗೆ ನೀರು ಬಿಡುವ ವಿಚಾರವಾಗಿ ಪ್ರತಿಭಟನೆ ನಡೆಸಿದಂತ ಸಂಘಟನೆ ಇದಾಗಿದೆ. ಡಾ.ಗಣಪತಿಯಪ್ಪ ಮಲೆನಾಡು ಗೇಣಿದಾರರ ಸಂಘವಾಗಿ ಶುರುವಾಗಿ, ತಾಲ್ಲೂಕು ರೈತ ಸಂಘವಾಗಿ ವಿಲೀನಗೊಂಡಿತ್ತು. ಕಡಿದಾಳು ಶ್ಯಾಮಣ್ಣ ಅವರು ಈ ಸಂಘಟನೆಯ ಜೊತೆಗಿದ್ದರು. 1974ರಲ್ಲಿ ಕಾಗೋಡು ಸತ್ಯಾಗ್ರಹಕ್ಕೂ ನಮ್ಮ ಸಂಘದಿಂದ ಬೆಂಬಲ ನೀಡಲಾಗಿದೆ. ಶಿವಮೊಗ್ಗದಿಂದ ಬೆಂಗಳೂರು ಚಲೋ ಕೂಡ ನಡೆಸಲಾಗಿತ್ತು. ಇಂತಹ ಸಂಘವನ್ನು ರಾಜ್ಯ ರೈತ ಸಂಘಟನೆಯೊಂದಿಗೆ ವಿಲೀನಗೊಳಿಸುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ರಾಮಚಂದ್ರ ಎಂ.ಎಲ್, ತಾಲ್ಲೂಕು ಉಪಾಧ್ಯಕ್ಷ ಕುಮಾರ್ ಗೌಡ್ರು ಕಟ್ಟೇಕೊಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಭದ್ರೇಶ್ ಬಾಳಗೋಡು ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ