ಶಿವಮೊಗ್ಗ : ಸಾಕುಪ್ರಾಣಿಗಳನ್ನು ಕಾಡಿಗೆ ಮೇಯಲು ಬಿಡಬಾರದು ಎನ್ನುವ ಅರಣ್ಯ ಸಚಿವರ ಹೇಳಿಕೆ ಅವೈಜ್ಞಾನಿಕವಾಗಿದೆ. ಸಚಿವರು ಮಾಡಿರುವ ಆದೇಶ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಜು. 28ರಂದು ಜಾನುವಾರುಗಳ ಸಹಿತ ರೈತ ಸಂಘದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆ ಸಾಗರ ನಗರದಲ್ಲಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಜುಲೈ. 22ರಂದು ಅರಣ್ಯ ಸಚಿವರು ಹೊರಡಿಸಿರುವ ಆದೇಶದಿಂದ ರೈತರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಜಾನುವಾರುಗಳನ್ನು ಕಾಡಿನಲ್ಲಿ ಮೇಯಿಸುವುದು ಬಿಟ್ಟು ಎಲ್ಲಿಗೆ ಮೇವಿಗೆ ಬಿಡಬೇಕು ಎಂದು ಪ್ರಶ್ನೆ ಉದ್ಭವಿಸಿದೆ ಎಂದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಬೇರೆಬೇರೆ ಪ್ರಕರಣ ಉಲ್ಲೇಖಿಸಿ ಈ ಆದೇಶ ಮಾಡಿದ್ದಾರೆ. ವಾಸ್ತವವಾಗಿ ಜಾನುವಾರುಗಳು ಕಾಡಿನೊಳಗೆ ಓಡಾಡಿದರೆ ಗಿಡಬಳ್ಳಿಗಳು ಚಿಗುರುತ್ತವೆಯೇ ವಿನಃ ಹಾಳಾಗುವುದಿಲ್ಲ. ನೂರಾರು ವರ್ಷಗಳಿಂದ ಜಾನುವಾರುಗಳು ಕಾಡಿನಲ್ಲಿ ಮೇಯಲು ಹೋಗುತ್ತಿರುವುದಕ್ಕೆ ದಾಖಲೆಗಳಿವೆ. ಬೇರೆಬೇರೆ ಕಾರಣಗಳಿಂದಾಗಿ ಅರಣ್ಯನಾಶವಾಗುತ್ತಿದೆಯೆ ವಿನಃ ಜಾನುವಾರು ಓಡಾಡಿ ಅರಣ್ಯನಾಶವಾಗುತ್ತಿದೆ ಎನ್ನುವ ವಾದ ಒಪ್ಪಲು ಸಾಧ್ಯವಿಲ್ಲ ಎಂದರು.
ಅರಣ್ಯ ಪ್ರದೇಶದಲ್ಲಿ ಸಾವಿರಾರು ಎಕರೆ ನಡುತೋಪು ನಿರ್ಮಿಸಲಾಗಿದೆ. ಟಿಂಬರ್ ಉದ್ಯಮ ಬೆಳೆಸುವ ಬದಲು ಸರ್ಕಾರ ನಡತೋಪುಗಳನ್ನು ಕಟಾವು ಮಾಡಿ ನೈಸರ್ಗಿಕ ಅರಣ್ಯ ಬೆಳೆಸುವತ್ತ ಗಮನ ಹರಿಸಬೇಕು. ರೈತರು ಕಾಡಿನಲ್ಲಿ ಜಾನುವಾರುಗಳನ್ನು ಲಾಗಾಯ್ತಿನಿಂದ ಮೇಯಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸರ್ಕಾರ ಅಡ್ಡಿಪಡಿಸುವ ಕೆಲಸ ಮಾಡಬಾರದು. ತಕ್ಷಣ ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಕಾಡಿನಲ್ಲಿ ಜಾನುವಾರು ಮೇಯಿಸಬಾರದು ಎನ್ನುವ ಆದೇಶ ಹಿಂಪಡೆಯದೇ ಇದ್ದರೇ ಜುಲೈ.28ರಂದು ಸಾಂಕೇತಿಕವಾಗಿ ಜಾನುವಾರುಗಳ ಜೊತೆ ಪ್ರತಿಭಟನಾ ಮರೆವಣಿಗೆ ನಡೆಸಲಾಗುತ್ತದೆ. ಸಾಗರ ತಾಲ್ಲೂಕಿನ ಅರಣ್ಯ ಇಲಾಖೆ ಮುಂದೆ ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸುತ್ತೇವೆ. ಸಚಿವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಹೋದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವ ಜೊತೆಗೆ ಸಾಗರ ತಾಲ್ಲೂಕಿನ ಎಲ್ಲ ರೈತರು ಜಾನುವಾರು ಸಮೇತ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಅನೇಕ ವಿರೋಧಗಳ ನಡುವೆಯೂ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಮುಂದಾಗಿದೆ. ಇದರಿಂದ ಸುಮಾರು 300 ಎಕರೆ ಅರಣ್ಯ ನಾಶವಾಗುತ್ತಿದ್ದು, ಲಕ್ಷಾಂತರ ಗಿಡಮರ ನಾಶವಾಗುತ್ತಿದೆ. ಸುಮಾರು 8500 ಕೋಟಿ ರೂ. ವೆಚ್ಚದ ಯೋಜನೆಯಿಂದ ಅರಣ್ಯ ನಾಶವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಉರುಳುಗಲ್ಲಿನಲ್ಲಿ ಅನೇಕ ವರ್ಷದಿಂದ ನಾಡಿಗೆ ಬೆಳಕು ನೀಡಲು ಸರ್ವಸ್ವ ಕಳೆದುಕೊಂಡವರು ಅರಣ್ಯ ಇಲಾಖೆಯ ಕಠುಧೋರಣೆಯಿಂದಾಗಿ ಕತ್ತಲಿನಲ್ಲಿಯೆ ಉಳಿದಿದ್ದಾರೆ. ಅರಣ್ಯ ಸಚಿವರು ಇಂತಹದನ್ನು ಏಕೆ ಗಮನಿಸುತ್ತಿಲ್ಲ. ಮುಖ್ಯಮಂತ್ರಿಗಳು ಅರಣ್ಯ ಸಚಿವರಿಗೆ ಬುದ್ದಿಹೇಳಿ ರೈತವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ, ಚಂದ್ರು ಸಿರವಂತೆ, ಲಕ್ಷ್ಮಣ್ ಹಾಜರಿದ್ದರು.
ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ಕೊಡುವುದನ್ನು ‘ಪೊಲೀಸ್ ಇಲಾಖೆ’ ಸಹಿಸುವುದಿಲ್ಲ: ಸಾಗರ ಡಿವೈಎಸ್ಪಿ ಎಚ್ಚರಿಕೆ