ಬೆಂಗಳೂರು: ಆಯುಷ್ಮಾನ್ ಭಾರತ್ ಜನಾರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಇಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರನ್ನ ಭೇಟಿ ಮಾಡಿ ಚೆರ್ಚೆ ನಡೆಸಿದ ಸಚಿವರು ರಾಜ್ಯದ ವಿವಿಧ ಆರೋಗ್ಯ ಯೋಜನೆಗಳ ಕುರಿತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರೊಂದಿಗೆ ಚರ್ಚೆ ನಡೆಸಿದರು.
ಪ್ರಸ್ತುತ ರಾಜ್ಯದಲ್ಲಿ 1 ಕೋಟಿ 15 ಲಕ್ಷ ಬಿಪಿಎಲ್ ಕಾರ್ಡುದಾರರಿದ್ದಾರೆ, ಬಿಪಿಎಲ್ ಹೊಂದಿದ ಎಲ್ಲರಿಗು ರಾಜ್ಯ ಸರ್ಕಾರ ಆಯುಷ್ಮಾನ್ ವಿಮೆಯಡಿ ಆರೋಗ್ಯ ಸೇವೆ ಒದಗಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಯೋಜನೆಯಡಿ ರಾಜ್ಯದ 69 ಲಕ್ಷ ಫಲಾನುಭವಿಗಳನ್ನ ಮಾತ್ರ ಪರಿಗಣಿಸಿದೆ. ಉಳಿದ ಫಲಾನುಭವಿಗಳಿಗೆ ರಾಜ್ಯ ಸರ್ಕಾರವೇ ಅನುದಾನ ಭರಿಸುತ್ತಿದ್ದು, ಕೇಂದ್ರ ಸರ್ಕಾರ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಿಕೊಡಬೇಕು ಎಂದು ಸಚಿವ ಜೆಪಿ ನಡ್ಡಾ ಅವರಿಗೆ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದ್ದಾರೆ.
ಭೇಟಿಯ ವೇಳೆ ರಾಜ್ಯ ಆರೋಗ್ಯ ಇಲಾಖೆಯು ಕೈಗೊಂಡಿರುವ ಆರೋಗ್ಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿರುವ ಸಚಿವರು, ಹಠಾತ್ ಹೃದಘಾತ ತಡೆಯಲು ಹೃದಯ ಜ್ಯೋತಿ ಯೋಜನೆ, ಡಯಾಲಿಸಿಸ್ ಯಂತ್ರಗಳಲ್ಲಿ ಏಕ ಬಳಕೆಯ ಡಯಲೈಸರ್ ಗಳ ಬಳಕೆ, ಆರು ವರ್ಷದೊಳಗಿನ ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್‌ಗಳು, 10 ಬೆಡ್ ಗಳ ಟೆಲಿ-ಐಸಿಯು ಸ್ಥಾಪನೆ ಮತ್ತು ಶಾಲಾ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಮತ್ತು ಮುಟ್ಟಿನ ಕಪ್‌ಗಳ ವಿತರಣೆ ಕುರಿತಾಗಿ ವಿವರಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವರಿಗೆ ಸಲ್ಲಿಸಿದ ಮನವಿಯ ಪ್ರಮುಖಾಂಶಗಳು ಹೀಗಿವೆ.
ಕಳೆದ ಎರಡು ವರ್ಷಗಳಿಂದ ಕ್ಷಯರೋಗದ ಔಷಧಿಗಳ ಅಸಮರ್ಪಕ ಪೂರೈಕೆಯನ್ನು ಎದುರಿಸುತ್ತಿದ್ದು, ವಿಶೇಷವಾಗಿ 4 FDC ಔಷಧಿಗಳ ಪೂರೈಕೆಯನ್ನು ವ್ಯವಸ್ಥಿತಗೊಳಿಸಲು ಮನವಿ
ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಮತ್ತು PM-ABHIM ಕಾರ್ಯಕ್ರಮಗಳ ಅಡಿಯಲ್ಲಿ ಅನುದಾನ ಮರುಹಂಚಿಕೆ ಮಾಡಲು ಮನವಿ.
ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯ ಸರ್ಕಾರದೊಂದಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದಿಂದ ಒಳಗೊಳ್ಳುವ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮನವಿ
ಗ್ರಾಮೀಣ ಭಾಗದಲ್ಲಿ ವೈದ್ಯರ ಕರ್ತವ್ಯ ನಿರ್ವಹಣೆಯನ್ನು ಪ್ರೋತ್ಸಾಹಿಸಲು NHM ಅಡಿಯಲ್ಲಿ ವೈದ್ಯರು ಮತ್ತು ಸ್ಟಾಫ್ ನರ್ಸ್‌ಗಳ ವೇತನವನ್ನು ಹೆಚ್ಚಿಸುವ ಪ್ರಸ್ತಾವನೆಗೆ ತ್ವರಿತವಾದ ಅನುಮತಿ
ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಸಲ್ಲಿಸಿದ ವಾರ್ಷಿಕ ಕ್ರಿಯಾ ಯೋಜನೆಗೆ ತ್ವರಿತ ಅನುಮೋದನೆ ನೀಡಲು ಮನವಿ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಸಹಯೋಗದೊಂದಿಗೆ ರಸ್ತೆ ಅಪಘಾತ ಸಂತ್ರಸ್ತ ಯೋಜನೆಯ ತ್ವರಿತ ಆರಂಭಕ್ಕೆ ಮನವಿ
ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಮಕ್ಕಳಿಗೆ ಬೆನ್ನುಮೂಳೆಯ ವಿರೂಪತೆಯ ಚಿಕಿತ್ಸೆಯಂತಹ ಅಪರೂಪದ ರೋಗ ಚಿಕಿತ್ಸೆಗಳನ್ನು ಸೇರ್ಪಡೆಗೊಳಿಸಲು ಮನವಿ
ಅಪರೂಪದ ರೋಗಗಳ ರಾಷ್ಟ್ರೀಯ ಕಾರ್ಯಕ್ರಮದ (NPRD) ಅಡಿಯಲ್ಲಿ, ವಿಶೇಷವಾಗಿ ಡುಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿಯಂತಹ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಆರ್ಥಿಕ ನೆರವು ಒದಗಿಸುವಂತೆ ಮನವಿ.
ರಾಜ್ಯದ ಮನವಿಗಳಿಗೆ ಕೇಂದ್ರ ಆರೋಗ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕರ್ನಾಟಕದಲ್ಲಿ ಆರೋಗ್ಯ ಸೇವೆಗಳನ್ನು ಇನ್ನಷ್ಟು ಬಲಪಡಿಸಲು ಕೇಂದ್ರ ಸರ್ಕಾರದ ಸಹಕಾರವನ್ನು ಸಚಿವ ದಿನೇಶ್ ಗುಂಡೂರಾವ್ ಕೋರಿದ್ದಾರೆ.
2026ರ ವೇಳೆಗೆ ಮಂಗನ ಕಾಯಿಲೆಗೆ ಲಸಿಕೆ ಲಭ್ಯ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರಲ್ಲಿ ಭಾರೀ ಮಳೆ ಎಫೆಕ್ಟ್: ಎಲ್ಲೆಲ್ಲಿ ಏನೇನು ಅವಾಂತರ? ಇಲ್ಲಿದೆ ಪುಲ್ ಡೀಟೆಲ್ಸ್