ಬೆಂಗಳೂರು: ಛಾಪಾ ಕಾಗದ (ಇ-ಸ್ಟಾಂಪಿಂಗ್) ಬದಲಿಗೆ ಡಿಜಿಟಲ್ ಇ-ಸ್ಟ್ಯಾಂಪಿಂಗ್ ವಿತರಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ 2025ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ರಾಜ್ಯ ಸರ್ಕಾರ ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯಲ್ಲಿನ ದೋಷ ಸರಿಪಡಿಸಲು ಮತ್ತು ವಂಚನೆಗಳನ್ನು ತಡೆಯಲು ಸ್ಟಾಂಪ್ (ತಿದ್ದುಪಡಿ) ವಿಧೇಯಕ 2025 ಜಾರಿಗೆ ತಂದಿದೆ. ಈ ಹಿಂದೆ ಇ-ಸ್ಟಾಂಪಿಂಗ್ ಛಾಪಾ ಕಾಗದಗಳನ್ನು ಬಳಸಲಾಗುತ್ತಿತ್ತು, ಆದರೆ ಇನ್ನು ಮುಂದೆ ಡಿಜಿಟಲ್ ಇ-ಸ್ಟಾಂಪಿಂಗ್ ವ್ಯವಸ್ಥೆ ಬಳಸಬಹುದಾಗಿದೆ.
ಬ್ಯಾಂಕ್ ಚಲನ್ಗಳ ಮೂಲಕ ಸ್ಟಾಂಪುಗಳ ದುರುಪಯೋಗ ತಡೆಯಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲ ನೀಡಲಾಗಿದೆ. ವಿದ್ಯನ್ಮಾನ ವಿಧಾನಗಳ ಮೂಲಕ ಸ್ಟಾಂಪ್ ಶುಲ್ಕ ಪಾವತಿಸಲು ನೂತನ ವಿಧೇಯಕ ಅವಕಾಶ ಕಲ್ಪಿಸಿದೆ.
ವಿದ್ಯುನ್ಮಾನ ವಿಧಾನಗಳ ಮೂಲಕ ಸ್ಟ್ಯಾಂಪ್ ಶುಲ್ಕ ಪಾವತಿಸಲು ನೂತನ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿಧಾನಸಭೆಯಲ್ಲಿ ಈ ವಿಧಯಕವನ್ನು ಮಂಡಿಸಿ ಮಾರ್ಚ್ 19ರಂದು ಒಪ್ಪಿಗೆ ಪಡೆದುಕೊಳ್ಳಲಾಗಿತ್ತು. ಇದೀಗ ರಾಜ್ಯಪಾಲರ ಅನುಮೋದನೆಯೊಂದಿಗೆ ಕಾನೂನು ರೂಪ ಪಡೆದುಕೊಂಡಿದೆ.
ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ, 1957 (1957 ರ ಕರ್ನಾಟಕ ಅಧಿನಿಯಮ ಸಂಖ್ಯೆ 34) ರ ಪ್ರಕರಣ 10 ಮತ್ತು ಪ್ರಕರಣ 68 ರ ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ರಚಿಸುತ್ತದೆ. ಅವುಗಳೆಂದರೆ,-
ಶೀರ್ಷಿಕೆ ಮತ್ತು ಪ್ರಾರಂಭ. (1) ಈ ನಿಯಮಗಳನ್ನು ಕರ್ನಾಟಕ ಸ್ಟ್ಯಾಂಪ್ (ಡಿಜಿಟಲ್ ಇ-ಸ್ಯಾಂಪ್) ನಿಯಮಗಳು, 2025 ಎಂದು ಕರೆಯಬಹುದು.
(2) ಇದು, ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಂದು ಜಾರಿಗೆ ಬರತಕ್ಕದ್ದು.
2. ಪರಿಭಾಷೆಗಳು.- (1) ಈ ನಿಯಮಗಳಲ್ಲಿ ಸಂದರ್ಭವು ಬೇರೆ ರೀತಿಯಲ್ಲಿ ಅಗತ್ಯಪಡಿಸದ ಹೊರತು-
(ಎ) “ಅಧಿನಿಯಮ” ಎಂದರೆ ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ, 1957 (1957 ರ ಕರ್ನಾಟಕ ಅಧಿನಿಯಮ ಸಂಖ್ಯೆ 34);
(ಬಿ) “ಮುಖ್ಯ ನಿಯಂತ್ರಕ ರಾಜಸ್ವ ಪ್ರಾಧಿಕಾರಿ” ಎಂದರೆ ಅಧಿನಿಯಮದ ಪ್ರಕರಣ 2(ಸಿ) ರಡಿಯಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಅಧಿಕಾರಿ;
(ಸಿ) “ಡಿಜಿಟಲ್ ಇ-ಸ್ಟ್ಯಾಂಪ್” ಎಂದರೆ ಸ್ಟಾಂಪ್ ಶುಲ್ಕದ ಪಾವತಿಯನ್ನು ಸೂಚಿಸುವ ವಿದ್ಯುನ್ಮಾನ ರೂಪದಲ್ಲಿ ಉತ್ಪತ್ತಿಯಾದ ಸ್ಟಾಂಪ್ ಅಥವಾ ದಾಖಲೆ;
(ಡಿ) “ಡಿಜಿಟಲ್ ಇ-ಸ್ಟ್ಯಾಂಪ್ ಅಪ್ಲಿಕೇಶನ್” ಎಂದರೆ ಡಿಜಿಟಲ್ ಇ-ಸ್ಟ್ಯಾಂಪ್ ನೀಡುವ ಉದ್ದೇಶಕ್ಕಾಗಿ ಸರ್ಕಾರವು ಅಭಿವೃದ್ಧಿಪಡಿಸಿದ ವಿದ್ಯುನ್ಮಾನ ವ್ಯವಸ್ಥೆ;
(ಇ) “ಡಿಜಿಟಲ್ ಇ-ಸ್ಟ್ಯಾಂಪ್ ರೆಪೊಸಿಟರಿ” ಎಂದರೆ ಸರ್ಕಾರವು ನಿರ್ವಹಿಸುವ ಡಿಜಿಟಲ್ ಇ-ಸ್ಟ್ಯಾಂಪ್‌ಗಳ ಭಂಡಾರ:
(ಎಫ್) “ಸರ್ಕಾರ” ಎಂದರೆ ಕರ್ನಾಟಕ ಸರ್ಕಾರ
(ಜಿ) “ನೋಂದಣಿ ಅಧಿಕಾರಿ” ಎಂದರೆ ನೋಂದಣಿ ಅಧಿನಿಯಮ, 1908 ರ ಪ್ರಕರಣ 6 ರ ಅಡಿಯಲ್ಲಿ ನೇಮಿಸಲ್ಪಟ್ಟ ಅಧಿಕಾರಿ (1908 ರ ಕೇಂದ್ರೀಯ ಅಧಿನಿಯಮ ಸಂಖ್ಯೆ 16);
(ಹೆಚ್) “ಪ್ರಕರಣ” ಎಂದರೆ ಅಧಿನಿಯಮದ ಒಂದು ಪ್ರಕರಣ;
(ಐ) “ಸ್ಟಾಂಪ್ ಡ್ಯೂಟಿ” ಎಂದರೆ ಅಧಿನಿಯಮದ ಅಡಿಯಲ್ಲಿ ಪಾವತಿಸಬೇಕಾದ ಶುಲ್ಕ;
(ಜೆ) “ಸ್ಯಾಂಪ್ ಡ್ಯೂಟಿ ಪಾವತಿಸುವವರು” ಎಂದರೆ ಅಧಿನಿಯಮದ ಪ್ರಕರಣ 30 ರ ನಿಬಂಧನೆಗಳ ಪ್ರಕಾರ, ಒಂದು ಲಿಖಿತಕ್ಕಾಗಿ ಸ್ಯಾಂಪ್ ಶುಲ್ಕ ಪಾವತಿಸುವ ಯಾವುದೇ ವ್ಯಕ್ತಿ;
(2) ಈ ನಿಯಮಗಳಲ್ಲಿ ಪರಿಭಾಷಿಸದೇ ಇರುವ ಶಬ್ದಗಳಿಗೆ ಕರ್ನಾಟಕ ಸ್ಟಾಂಪು ಅಧಿನಿಯಮ, 1957 ಮತ್ತು ನೊಂದಣಿ ಅಧಿನಿಯಮ, 1908 (1908 ರ ಕೇಂದ್ರೀಯ ಅಧಿನಿಯಮ ಸಂಖ್ಯೆ 16) ಮತ್ತು ಅವುಗಳ ಕೆಳಗೆ ರಚಿತವಾದ ನಿಯಮಗಳಲ್ಲಿ ಕೊಟ್ಟ ಅರ್ಥವೇ ಇರತಕ್ಕದ್ದು.