ಬೆಂಗಳೂರು: ಮುಖ್ಯಮಂತ್ರಿಗಳು ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರಾ? ತಮ್ಮ ಸರಕಾರದ ಅವಧಿ ಮುಗಿದುದಕ್ಕೆ ಬೈಬೈ- ಗುಡ್ ಬೈ ಎಂದು ಧನ್ಯವಾದ ಹೇಳಿದ್ದಾರೋ ಅರ್ಥ ಆಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಮುಖದ ಕಳೆ ನೋಡಿದರೆ ಅವರು ಸರಕಾರದ ಕೊನೆ ಅವಧಿ ಎದುರಿಸುತ್ತಿರುವಂತಿತ್ತು ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಸರಕಾರದ ಒಂದು ವರ್ಷ ಕೊಲೆಗಡುಕರಿಗೆ ಹರ್ಷ. ಒನ್ ಇಯರ್ ಖಜಾನೆ ಫುಲ್ ಕ್ಲಿಯರ್, ಖಾಲಿ ಖಾಲಿ. ವರುಷ ಒಂದು ಸಮಸ್ಯೆಗಳು ನೂರೊಂದು. ಕಾಂಗ್ರೆಸ್ ಸರಕಾರ ಬಂತು; ಜನರ ಮುಖದಲ್ಲಿ ಹರ್ಷ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಲೂಟಿ ಎಷ್ಟು ಕೋಟಿ ಎಂದು ಜನರು ಲೆಕ್ಕ ಹಾಕುತ್ತಿದ್ದಾರೆ. ನೇಹಾ, ಮೀನಾ, ಅಂಜಲಿ ಎಂಬ ಮಹಾಲಕ್ಷ್ಮಿಯರು. ನಮ್ಮ ಮನೆಯ ಮಹಾಲಕ್ಷಿಯರಿಗಿಲ್ಲ ಬದುಕುವ ಭಾಗ್ಯ ಎಂದರಲ್ಲದೆ, ನೇಹಾ, ಮೀನಾ, ಅಂಜಲಿ ಆಯ್ತು. ಮುಂದೆ ಯಾರೆಂದು ನಮ್ಮ ಹೆಣ್ಮಕ್ಕಳು ಆತಂಕದಿಂದ ಕಾಯುತ್ತಿದ್ದಾರೆ ಎಂದು ನುಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.