ಶಿವಮೊಗ್ಗ: ಧರ್ಮಸ್ಥಳ ಸಂಘದಿಂದ ಹೆಚ್ಚಿನ ಬಡ್ಡಿದರವನ್ನು ವಸೂಲಿ ಮಾಡಲಾಗುತ್ತಿದೆ ಎಂಬುದೆಲ್ಲ ಸುಳ್ಳು. ಅಲ್ಲದೇ ಯಾರಿಗೂ ಕಿರುಕುಳ ಕೂಡ ನೀಡುತ್ತಿಲ್ಲ. ಬ್ಯಾಂಕ್ ಎಷ್ಟು ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡುತ್ತಿದೆಯೋ ಅಷ್ಟೇ ವಿಧಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಸುದ್ದಿ ಸುಳ್ಳು ಎಂಬುದಾಗಿ ಸಾಗರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಾಂತಾ ನಾಯ್ಕ್ ಸ್ಪಷ್ಟ ಪಡಿಸಿದ್ದಾರೆ.
ಸಾಗರ ತಾಲ್ಲೂಕಿನಲ್ಲಿ 90,40,00,000 ಸಾಲಸೌಲಭ್ಯ
ಮಂಗಳವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರ ತಾಲ್ಲೂಕು ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ 3007 ಸಂಘಗಳು ನೋಂದಣಿ ಮಾಡಿಕೊಂಡಿದ್ದಾವೆ. ಸದ್ಯ 23,860 ಸದಸ್ಯರಿದ್ದಾರೆ. ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ (ರಿ) ಚಾಲ್ತಿ ಪ್ರಗತಿ ನಿಧಿ 90,40,00,000 ಆಗಿದೆ ಎಂಬುದಾಗಿ ತಿಳಿಸಿದರು.
ಈವರೆಗೆ ಸಂಘದಿಂದ ಸದಸ್ಯರಿಗೆ ಸುರಕ್ಷಾ ಕ್ಲೈಂ, ಆರೋಗ್ಯ ರಕ್ಷಾ ಕ್ಲಂ ಅಡಿಯಲ್ಲಿ 471 ಮಂದಿಗೆ 67,96,685 ರೂ ನೀಡಲಾಗಿದೆ. ಸ್ವಸ್ಥ್ಯಾ ಸಂಕಲ್ಪ, ಮಾಧಕ ವಸ್ತು ದಿನಾಚರಣೆ, ತಂಬಾಕು ವಿರೋಧಿ ದಿನಾಚರಣೆ ಸೇರಿದಂತೆ 15 ಕಾರ್ಯಕ್ರಮವನ್ನು ಸಂಘದಿಂದ ಆಯೋಜಿಸಲಾಗಿದೆ. ಇದಕ್ಕಾಗಿ 25,000 ಖರ್ಚು ಮಾಡಲಾಗಿದೆ ಎಂದರು.
ಸುಜ್ಞಾನ ನಿಧಿಯಡಿ 150 ಮಂದಿಗೆ ರೂ.25,500, ಪ್ರತಿ ತಿಂಗಳು 60 ವರ್ಷ ಮೇಲ್ಪಟ್ಟ ಸದಸ್ಯರಿಗೆ ಮಾಶಾಸನ ರೂಪದಲ್ಲಿ 111 ಜನರಿಗೆ ರೂ.1,11,000 ನೀಡಲಾಗುತ್ತಿದೆ. 181 ದೇವಸ್ಥಾನಗಳನ್ನು ರೂ.1,63,00,000ನಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಅಕ್ಷರ ದಾಸೋಹ, ಕೊಠಡಿ ದುರಸ್ಥಿಗಾಗಿ 50,000 ನೀಡಲಾಗಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ
ಶಿಕ್ಷಕರ ಕೊರತೆಯಿರುವ ಸರ್ಕಾರಿ ಶಾಲೆಗಳಿಗೆ ಜ್ಞಾನದೀಪ ಯೋಜನೆಯ ಅಡಿಯಲ್ಲಿ ಮೂವರು ಶಿಕ್ಷಕರನ್ನು ನೇಮಿಸಲಾಗಿದ್ದು, ಅವರಿಗೆ ಪ್ರತಿ ತಿಂಗಳು 8,000ದಂತೆ 2,40,000 ರೂ ಒದಗಿಸಲಾಗಿದೆ. 1 ಶಾಲಾ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಕೃಷಿ ಅನುದಾನದ ರೂಪದಲ್ಲಿ 1342 ರೈತರಿಗೆ ರೂ.28,31,750 ಸಾಲ ಸೌಲಭ್ಯ ಒದಗಿಸಲಾಗಿದೆ. ಕೆರೆ ಕಾರ್ಯಕ್ರಮದಡಿ 8 ಕೆರೆಗಳಿಗೆ 58,00,000 ಒದಗಿಸಲಾಗಿದೆ. ಸಾಗರದ ಸರ್ಕಾರಿ ಆಸ್ಪತ್ರೆಗೆ 1 ಡಯಾಲಿಸಿಸ್ ಯಂತ್ರ ಕೊಡಿಸಲಾಗಿದೆ. ಹಣ ರಹಿತ ಸಂಪೂರ್ಣ ಸುರಕ್ಷಾ ಕ್ಲೈಂ ಮತ್ತು ಆರೋಗ್ಯ ರಕ್ಷಾ ಕ್ಲೈಂ ಅಡಿಯಲ್ಲಿ 326 ಸಂಘದ ಸದಸ್ಯರಿಗೆ ರೂ.45,14,275 ಹಣವನ್ನು ನೀಡಲಾಗಿದೆ. ಇದುವರೆಗೆ 700 ಜನರಿಗೆ 14,00,000 ಸಹಾಯಧವನ್ನು ಸಂಘದಿಂದ ನೀಡಲಾಗಿದೆ. ಇನ್ನೂ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಘದಿಂದ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಿದರು.
ಬ್ಯಾಂಕ್ ನಷ್ಟೇ ಬಡ್ಡಿ ದರದಲ್ಲಿ ಸಾಲಸೌಲಭ್ಯ
ಧರ್ಮಸ್ಥಳ ಸಂಘದಿಂದ ಶೇ.14ರಷ್ಟು ಬಡ್ಡಿದರದಲ್ಲಿ ವಾರದ ರೂಪದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಬ್ಯಾಂಕ್ ನಿಂದ ಕೂಡ ಸಂಘಕ್ಕೆ ಅದೇ ಮಾದರಿಯಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಅನೇಕರು ಬ್ಯಾಂಕ್ ಬಡ್ಡಿದರದಲ್ಲಿ ನೀಡುತ್ತಿಲ್ಲ. ಶೇ.8ರಷ್ಟು ಬಡ್ಡಿದರದಲ್ಲಿ ಬ್ಯಾಂಕ್ ನಿಂದ ಪಡೆದು, ಶೇ.14ರ ಬಡ್ಡಿದರದಲ್ಲಿ ಜನರಿಗೆ ಸಾಲ ಕೊಡುತ್ತಿದೆ ಎಂಬುದು ಸುಳ್ಳು. ನಮಗೆ ಬ್ಯಾಂಕ್ ಕೊಡುತ್ತಿರುವುದು ಶೇ.14ರಷ್ಟು ಬಡ್ಡಿದರದಲ್ಲೇ ಸಾಲ. ನಾವು ಕೊಡುತ್ತಿರುವುದು ಅದೇ ದರದಲ್ಲಿ ಸಾಲವೆಂದು ಸ್ಪಷ್ಟ ಪಡಿಸಿದರು.
ಧರ್ಮಸ್ಥಳ ಸಂಘದಿಂದ ಯಾರಿಗೂ ಕಿರುಕುಳ ನೀಡುವುದಿಲ್ಲ
ಕೆಲ ದಿನಗಳ ಹಿಂದೆ ಧರ್ಮಸ್ಥಳ ಸಂಘದಿಂದ ಸಾಲ ಪಡೆದು, ಕಿರುಕುಳಕ್ಕೆ ಬೇಸತ್ತು ಮಹಿಳೆ ಸಾವನ್ನಪ್ಪಿದಂತ ಸುದ್ದಿ ಹರಿದಾಡುತ್ತಿರುವುದು ನೀವು ಓದಿದ್ದೀರಿ. ಆದರೇ ಅದು ಸತ್ಯಕ್ಕೆ ದೂರವಾಗಿರೋದು. ಮೃತ ಮಹಿಳೆ ಧರ್ಮಸ್ಥಳ ಸಂಘದಲ್ಲಿ ಅಷ್ಟೇ ಅಲ್ಲದೇ ಇತರೆ ಕಡೆಯಲ್ಲೂ ಸಾಲ ಪಡೆದಿದ್ದರು. ಆ ಕಾರಣದಿಂದಲೇ ಸಾವಿಗೆ ಶರಣಾಗಿದ್ದಾರೆ. ಆ ಮಹಿಳೆ ನಮ್ಮ ಸಂಘದ ಒಂದೇ ಒಂದು ವಾರದ ಕಂತು ಮಾತ್ರ ಕಟ್ಟುವುದು ಬಾಕಿ ಇತ್ತು. ಅವರಿಗೆ ಸಂಘದಿಂದ ಕಿರುಕುಳ ನೀಡಿಲ್ಲ. ಅವರ ಸಾವಿಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂಬುದಾಗಿ ತಿಳಿಸಿದರು.
ಪತ್ರಕರ್ತರಿಗೂ ಸುರಕ್ಷಾ ಕ್ಲೈಂ, ಆರೋಗ್ಯ ರಕ್ಷಾ ಕ್ಲೈಂಗೆ ಪ್ರಯತ್ನ
ಇದೇ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನಾಧಿಕಾರಿ ಶಾಂತಾ ನಾಯ್ಕ್ ಅವರಿಗೆ ಪತ್ರಕರ್ತರಿಗೂ ಸುರಕ್ಷಾ ಕ್ಲೈಂ, ಆರೋಗ್ಯ ರಕ್ಷಾ ಕ್ಲೈಂ ಯೋಜನೆ ತರುವಂತೆ ಮನವಿ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದಂತ ಅವರು, ಸಂಘದ ಅಧ್ಯಕ್ಷರಾದಂತ ಡಾ.ವೀರೇಂದ್ರ ಹೆಗಡೆ ಅವರಲ್ಲಿ ಈ ಬಗ್ಗೆ ಮನವಿ ಮಾಡಲಾಗುತ್ತದೆ. ಅವರ ಗಮನಕ್ಕೆ ತಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮೂಲಕ ಪತ್ರಕರ್ತರಿಗೂ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಮಾಡುವಂತ ಭರವಸೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಸಾಗರ ತಾಲ್ಲೂಕು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ಸಿಹೆಚ್ ಎಸ್ಸಿ ಯೋಜನಾಧಿಕಾರಿ ರಮೇಶ್, ಮೇಲ್ವಿಚಾರಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು