ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ನಡೆಸಲು ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಎ, ಬಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಆಯಾ ದೇವಸ್ಥಾನಗಳಲ್ಲಿ ಅನುದಾನ ಲಭ್ಯವಿರುತ್ತದೆ. ಆದರೆ ಸಿ ಗ್ರೇಡ್ ದೇವಸ್ಥಾನಗಳಲ್ಲಿ ಅನುದಾನ ಇಲ್ಲದೇ ಇರುವುದರಿಂದ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಯನ್ನು ಶ್ರೀಮಂತ ದೇವಸ್ಥಾನಗಳ ವತಿಯಿಂದ ನಡೆಸಲು ಆದ್ಯತೆ ನೀಡಲಾಗುವುದು ಎಂದರು. ಕುಕ್ಕೆ ದೇವಸ್ಥಾನದ ವತಿಯಿಂದ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು, ಅಭಿವೃದ್ಧಿಯೂ ನಡೆಯುತ್ತಿದೆ ಎಂದರು.
ಮೂರು ವರ್ಷದವರೆಗೆ ಪ್ರಾಧಿಕಾರ ಇಲ್ಲ:
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸ ಮಾಡಲಾಗುವುದು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಾಧಿಕಾರ ಆಗಬೇಕೆಂಬ ಬೇಡಿಕೆ ಇದೆ. ಈಗ ಸಮಿತಿ ಇರುವುದರಿಂದ ಮುಂದಿನ ಮೂರು ವರ್ಷದವರೆಗೆ ಪ್ರಾಧಿಕಾರ ಮಾಡುವುದಿಲ್ಲ, ಆ ಬಳಿಕ ಯೋಚನೆ ಮಾಡೋಣ ಎಂದರು.
ಜಿಲ್ಲೆಯ ಬಸ್ ಸಮಸ್ಯೆ ಪರಿಹಾರಕ್ಕೆ ಕ್ರಮ:
ಈ ಹಿಂದೆ ನಾಲ್ಕು ವರ್ಷ ಬಿಎಂಟಿಸಿಗೆ ಮಾತ್ರ ಬಸ್ ಖರೀದಿಸಲಾಗಿತ್ತು. ಈಗ ಬಸ್ ಖರೀದಿಸಲಾಗುತ್ತಿದೆ. ಈ ವರ್ಷ ಸುಮಾರು 800 ಬಸ್ ಕೆಎಸ್‌ಆರ್‌ಟಿಸಿಗೆ ಬರಲಿದೆ. ಇದರಲ್ಲಿ ದಕ್ಷಿಣ ಕನ್ನಡಕ್ಕೆ ಆದ್ಯತೆ ನೀಡಲಾಗುವುದು. ಡ್ರೈವರ್‌ಗಳ ನೇಮಕ ಮಾಡಲಾಗಿದ್ದು, 340 ಚಾಲಕರನ್ನು ಪುತ್ತೂರಿಗೆ ನೀಡಲಾಗಿದೆ. 200 ಚಾಲಕರನ್ನು ಮಂಗಳೂರಿಗೆ ನೀಡಲಾಗಿದೆ. ಬಳಿಕ ಚಾಮರಾಜನಗರ, ರಾಮನಗರ ವಿಭಾಗಕ್ಕೆ ನೀಡಲಾಗಿದೆ. 2000 ಚಾಲಕರಲ್ಲಿ 1 ಸಾವಿರ ಚಾಲಕರನ್ನು ಈ ನಾಲ್ಕು ವಿಭಾಗಕ್ಕೆ ನೀಡಲಾಗಿದೆ ಎಂದರು.
ಮಂಗಳೂರು ವಿಮಾನ ನಿಲ್ದಾಣದಿಂದ ಕುಕ್ಕೆಗೆ ಒಂದೆರಡು ತಿಂಗಳಲ್ಲಿ ಮೂರು ಬಸ್ ಗಳ ವ್ಯವಸ್ಥೆ ಮಾಡಲಾಗುವುದು. ಶಾಲಾ-ಕಾಲೇಜು ಮಕ್ಕಳಿಗೆ ಬಸ್ ನಿಲ್ಲಿಸದೇ ಇದ್ದಲ್ಲಿ ದೂರು ನೀಡಿ ಎಂದು ಸಚಿವರು ಪ್ರಶ್ನೆಗೆ ಉತ್ತರಿಸಿದರು.
ಕೇಂದ್ರದ ಪ್ರಸಾದ ಯೋಜನೆಗೆ ರಾಜ್ಯದ 54 ದೇವಸ್ಥಾನಗಳ ಪಟ್ಟಿ ಕಳುಹಿಲಾಗಿದೆ. ಪ್ರಸಾದ ಯೋಜನೆ ದೇಶಾದ್ಯಂತ ನಡೆಲಾಗುತ್ತಿದ್ದು, ಇದರಲ್ಲಿ ರಾಜ್ಯದ ನಾಲ್ಕು ದೇವಸ್ಥಾನಕ್ಕೆ ಅನುದಾನ ಬಂದಿದೆ. ಮೈಸೂರಿಗೆ 30 ಕೋಟಿ, ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ 32 ಕೋಟಿ, ಇತರೆ ಎರಡು ದೇವಸ್ಥಾನಕ್ಕೆ 15 ಲಕ್ಷ ಬಂದಿದೆ ಎಂದರು.
ಕಡಬಕ್ಕೆ ಬಸ್ ನಿಲ್ದಾಣಕ್ಕೆ ಗುರುತಿಸಲಾದ ಜಾಗಕ್ಕೆ ರಸ್ತೆಗೆ ಜಾಗ ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಮೂಲಕ ಜಾಗ ಮಾಡಿಕೊಳ್ಳಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರಲ್ಲಿ ಸೂಚಿಸಿದರು. ಸುಬ್ರಹ್ಮಣ್ಯಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ಬೇಡಿಕೆ ಇದೆ. ಅದಕ್ಕೆ ಯೇನೆಕಲ್ಲಿನಲ್ಲಿ ಜಾಗ ಗುರುತಿಸಲಾಗಿದ್ದು ಕಂದಾಯ ಸಚಿವರ ಮೂಲಕ ಪರಿಶೀಲನೆ ನಡೆಸಲಾಗುವುದು ಎಂದರು.
ಕುಕ್ಕೆಯಲ್ಲಿ 24 ಗಂಟೆ ಆರೋಗ್ಯ ಸೇವೆ ಭರವಸೆ
ಕುಕ್ಕೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಡಿಕೆ ಇದೆ. ತಕ್ಷಣಕ್ಕೆ ನಮಗೆ ದೇವಸ್ಥಾನದ ಆಸು-ಪಾಸಿನಲ್ಲಿ ಜಾಗ ಕೊಟ್ಟಲ್ಲಿ 24 ಗಂಟೆ ಆರೋಗ್ಯ ಸೇವೆ ನೀಡುವ ಕೇಂದ್ರ ಮಾಡುತ್ತೇವೆ. ಈ ಬಗ್ಗೆ ಆರೋಗ್ಯ ಸಚಿವರಲ್ಲಿ ಮಾತನಾಡುತ್ತೇನೆ. ಸುಬ್ರಹ್ಮಣ್ಯ ಆಸ್ಪತ್ರೆಗೆ ವೈದ್ಯರ, ಸಿಬ್ಬಂದಿ ನೇಮಕದ ಬಗ್ಗೆಯೂ ಆರೋಗ್ಯ ಸಚಿವರಲ್ಲಿ ಮಾತನಾಡುತ್ತೇನೆ ಎಂದರು.
ಸಭೆ-ಪರಿಶೀಲನೆ:
ರಾಮಲಿಂಗ ರೆಡ್ಡಿ ಅವರು ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಮಾಸ್ಟರ್ ಪ್ಲಾನ್ ಸಭೆ ನಡೆಸಿದರು. ಸಭೆಯಲ್ಲಿ 3ನೇ ಹಂತದ ಮಾಸ್ಟರ್ ಪ್ಲಾನ್ ಯೋಜನೆಯ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗಿ, ದೇವಸ್ಥಾನದ ಸುತ್ತು ಪೌಳಿ, ಪಾರಂಪರಿಕ ಶೈಲಿಯ ರಥಬೀದಿ, 5 ಸಾವಿರ ಮಂದಿಗೆ ಏಕ ಕಾಲದಲ್ಲಿ ಕುಳಿತು ಭೋಜನ ಪ್ರಸಾದ ಸ್ವೀಕರಿಸುವ ಕೊಠಡಿ, ವಸತಿ ಕಟ್ಟಡ, ಸಿಬ್ಬಂದಿಗಳ ವಸತಿ ಗ್ರಹ ಮತ್ತಿತರ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯ ಬಳಿಕ ಸಚಿವರು ಇಂಜಾಡಿ, ಆದಿ ಸುಬ್ರಹ್ಮಣ್ಯ, ಹೊಸ ಆಶ್ಲೇಷ ಬಲಿ ಪೂಜಾ ಮಂದಿರ ನಿರ್ಮಾಣವಾಗಲಿರುವ ಸ್ಥಳ, ಎಸ್‌ಎಸ್‌ಪಿಯು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ಆದಿ ಸುಬ್ರಹ್ಮಣ್ಯ ರಸ್ತೆಯ ತುಳುಸಿತೋಟ ಎಂಬಲ್ಲಿ ದಾನಿಗಳಾದ ಮಾಜಿ ಸಚಿವ ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ವತಿಯಿಂದ ನಿರ್ಮಾಣವಾಗಲಿರುವ ಆಶ್ಲೇಷ ಬಲಿ ಪೂಜಾ ಮಂದಿರದ ನಿರ್ಮಾಣ ಕಾಮಗಾರಿಗೆ ದಾನಿಗಳಿಗೆ ಸಚಿವ ರಾಮಲಿಂಗ ರೆಡ್ಡಿ ಆದೇಶ ಪತ್ರ ಹಸ್ತಾಂತರಿಸಿದರು ಹಾಗೂ ದಾನಿಗಳನ್ನು ಗೌರವಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ರಮಾನಾಥ ರೈ, ಮುಜರಾಯಿ ಇಲಾಖೆ ಆಯುಕ್ತ ವೆಂಕಟೇಶ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ, ರವಿಶಂಕರ ಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸದಸ್ಯರು ಉಪಸ್ಥಿತರಿದ್ದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಸಚಿವ ರಾಮಲಿಂಗಾರೆಡ್ಡಿ’ ಅಧ್ಯಕ್ಷತೆಯಲ್ಲಿ ‘ಮಾಸ್ಟರ್ ಪ್ಲಾನ್’ ಸಭೆ