ಬೆಂಗಳೂರು : ಇತ್ತೀಚೆಗೆ ನಿಧನರಾದ ಜನಪ್ರತಿನಿಧಿಗಳು, ಚಿತ್ರನಟರು, ಸಾಹಿತಿಗಳ ಒಡನಾಟವನ್ನು ಸ್ಮರಿಸುತ್ತಾ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಸೋಮವಾರ ಸಂತಾಪ ಸೂಚಿಸಿದರು.
ಮುಂಗಾರು ಅಧಿವೇಶನದ ಸಂತಾಪ ಸೂಚನೆ ನಿರ್ಣಯ ಕುರಿತು ಮಾತನಾಡಿದ ಶಿವಕುಮಾರ್ ಅವರು ಸೋಮವಾರ ಹೇಳಿದ್ದಿಷ್ಟು:
“ನಮ್ಮ ಯಾರ ಬದುಕು ಶಾಶ್ವತವಲ್ಲ. ನಮ್ಮ ಸಾಧನೆಗಳು ಮಾತ್ರ ಶಾಶ್ವತ. ನಮ್ಮ ಜೊತೆ ಕೆಲಸ ಮಾಡಿದಂತಹ ಅನೇಕ ನಾಯಕರನ್ನು ಕಳೆದುಕೊಂಡಿದ್ಧೇವೆ. ರಾಜಕೀಯ, ಚಲನಚಿತ್ರ, ಸಾಹಿತ್ಯ ಸೇರಿದಂತೆ ಸಾಮಾಜಿಕ ಹೊಣೆಗಾರಿಕೆಯ ಕೆಲಸಗಳನ್ನು ಮಾಡಿರುವಂತಹ ಗಣ್ಯರನ್ನು ಸ್ಮರಿಸಿಕೊಳ್ಳುವ ಸಂದರ್ಭ ಬಂದಿದೆ.
ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೂ ದೊರೆತಿತ್ತು. 1989 ರಿಂದ ಶಾಸಕರಾಗಿ, ಮಂತ್ರಿಗಳಾಗಿ, ಪ್ರಾಥಮಿಕ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು.
ಜನರಲ್ ಹಾಸ್ಟಲ್ ನಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಪಕ್ಕದ ಕೊಠಡಿಯಲ್ಲಿದ್ದೆ
ಶ್ರೀನಿವಾಸ್ ಪ್ರಸಾದ್ ಅವರ ಕೈ ಕೆಳಗೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಜನರಲ್ ಹಾಸ್ಟಲ್ ನಲ್ಲಿ ಅವರ ಪಕ್ಕದ ಕೊಠಡಿಯಲ್ಲಿಯೇ ಇದ್ದೆ. ಕೊಠಡಿ ಸಂಖ್ಯೆ 108 ರಲ್ಲಿ ನಾನಿದ್ದೆ. ಅವರು 114 ರಲ್ಲಿ ಇದ್ದರು. ಬಹಳ ವರ್ಷಗಳ ಕಾಲ ಜೊತೆಯಲ್ಲಿ ಇದ್ದೆ. ನನಗೆ 1985 ರಲ್ಲಿ ವಿಧಾನಸಭಾ ಟಿಕೆಟ್ ನೀಡುವ ವೇಳೆ ರಾಜೀವ್ ಗಾಂಧಿ ಅವರು ಆಸ್ಕರ್ ಫರ್ನಾಂಡಿಸ್ ಅವರನ್ನು ಒಪ್ಪಿಸಿ ಶ್ರೀನಿವಾಸ್ ಪ್ರಸಾದ್ ಅವರನ್ನು ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷರು ಎಂದರೆ ಉನ್ನತವಾದ ಹುದ್ದೆ. ಉತ್ತಮ ವಾಗ್ಮಿ, ಹೋರಾಟಗಾರರಾಗಿದ್ದರು. ಕೊನೆಗಾಲದಲ್ಲಿ ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೆ ಹೋದರು. ನಮ್ಮ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಬಹಳ ಸಕ್ರಿಯವಾಗಿ ಕೆಲಸ ಮಾಡಿದ್ದರು. ಬಹಳ ಸ್ನೇಹಮಯಿ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಅವರು.
ಸಿರಾ ವಿಧಾನಸಭಾ ಕ್ಷೇತ್ರದ ಮೂಡಲಗಿರಿಯಪ್ಪ ಅವರು ನನಗೂ ಹೆಚ್ಚು ಆತ್ಮಿಯರಾಗಿದ್ದರು. ಮೂರು ಬಾರಿ ಸಂಸದರಾಗಿದ್ದರು. ಅವರ ಮಗ ರಾಜೇಶ್ ಗೌಡ ಸಹ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರು.
ಎಂ.ಪಿ.ಕೇಶವಮೂರ್ತಿ ಅವರು ಮತ್ತು ನಾನು ಒಂದೇ ಜಿಲ್ಲೆಯವರು. ಆನೇಕಲ್, ಕನಕಪುರ, ರಾಮನಗರ, ದೇವನಹಳ್ಳಿ, ಚನ್ನಪಟ್ಟಣ ಇವೆಲ್ಲಾ ಸೇರಿದ ಬೆಂಗಳೂರು ಜಿಲ್ಲೆಯವರು. ಶಾಸಕರು, ಮಂತ್ರಿಗಳಾಗಿದ್ದಾಗ ಪಕ್ಷ ಸಂಘಟನೆಗಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ.
ವಸಂತ್ ಬಂಗೇರ ಅವರು ಐದು ಬಾರಿ ವಿಧಾನಸಭೆ ಪ್ರವೇಶ ಮಾಡಿ ನಮ್ಮ ಜೊತೆ ಕೆಲಸ ಮಾಡಿದವರು. ಬಹಳ ಮುಂಗೋಪಿ ಆದರೆ ಬಹಳ ನಿಷ್ಠಾವಂತರಾಗಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತರು. ಹಾಗೂ ಡಾ.ಬಸನಗೌಡ ಪಾಟೀಲ್ ಅವರು 7 ಬಾರಿ ವಿಧಾನಸಭೆಗೆ ಪ್ರವೇಶ ಮಾಡಿದ್ದರು. ಇವರನ್ನೆಲ್ಲಾ ಸ್ಮರಿಸಿಕೊಳ್ಳುವ ಸುದಿನ ನಮ್ಮದು.
ಟಿ.ಎಸ್. ಶಿವಶಂಕರಪ್ಪ ಅವರು ನನಗೆ ಬಹಳ ಆತ್ಮಿಯರು 2004ರಲ್ಲಿ ವಿಧಾನಸಭೆ ಪ್ರವೇಶ ಮಾಡಿದ್ದರು. ನಂತರ ಸೋತರು, ಆನಂತರ ಬಂಡಾಯ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದರು. ಅತ್ಯಂತ ಸರಳಜೀವಿಯಾಗಿದ್ದರು.
ಮೈಸೂರಿನ ವಾಸು ಅವರು ಆತ್ಮೀಯ ಸ್ನೇಹಿತರು ಹಾಗೂ ನಾನು ನಗರಾಭಿವೃದ್ಧಿ ಸಚಿವನಾಗಿದ್ಧಾಗ ಮೈಸೂರಿನ ಮೇಯರ್ ಆಗಿದ್ದರು. ಪಕ್ಷ ಸಂಘಟನೆಗೆ ಸಾಕಷ್ಟು ಕೆಲಸ ಮಾಡಿದವರು. 2013ರಲ್ಲಿ 14 ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇತ್ತೀಚೆಗೆ ಅನಾರೋಗ್ಯದ ಕಾರಣಕ್ಕೆ ನಿಧನವಾದರು.
ಚಿತ್ರನಟ ದ್ವಾರಕೀಶ್ ಅವರ ಚಲನಚಿತ್ರಗಳನ್ನು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ತೆಗೆದುಕೊಂಡು ನೋಡುತ್ತಿದ್ದ ನೆನಪು. ವಿಷ್ಟುವರ್ಧನ್ ಅವರ ಜೊತೆಗೂಡಿ ಉತ್ತಮ ಚಿತ್ರಗಳನ್ನು ನೀಡಿದ್ದರು. ಸಿಂಗಾಪುರದಲ್ಲಿ ರಾಜ ಕುಳ್ಳ ಸಿನಿಮಾವನ್ನು ನವರಂಗ್ ಥಿಯೇಟರ್ ನಲ್ಲಿ ನೋಡಿದ್ದೆ. ಆತ್ಮೀಯರಾಗಿದ್ದ ಅವರು ಮತ್ತು ನಾವು ಒಟ್ಟಿಗೆ ಚಿತ್ರರಂಗದಲ್ಲಿ ಕೆಲಸ ಮಾಡಿದ ನೆನಪಿದೆ.
ಕಮಲಾ ಹಂಪನಾ ಅವರು ಕಳೆದ 50 ವರ್ಷಗಳಿಂದ ನನಗೆ ಚಿರಪರಿಚಿತರು. ಅವರ ಮಗ ಮತ್ತು ನಾನು ಎನ್ ಪಿಎಸ್ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದೆವು. ಅವರ ಪತಿ ಹಂಪಾ ನಾಗರಾಜಯ್ಯ ಅವರು ಹಾಗೂ ಕುಟುಂಬ ಬಹಳ ಆತ್ಮೀಯರು. ಇವರ ಮಗ ಉತ್ತಮ ವಿನ್ಯಾಸಕಾರರು. ರಾಜಾಜಿನಗರದಲ್ಲಿ ಅವರ ಕುಟುಂಬದ ಜೊತೆ ಬಾಲ್ಯ ಜೀವನ ಕಳೆದ ನೆನಪುಗಳಿವೆ.
ಇತ್ತೀಚೆಗೆ ನಿಧನರಾದ ಅಪರ್ಣಾ ಅವರು ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಬಳಕೆ ಮಾಡಿ ಮೆರುಗು ನೀಡುತ್ತಿದ್ದವರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮ ಕೇಂದ್ರ ಕಮಿಟಿ ಸದಸ್ಯರಾಗಿದ್ದ ಸಯ್ಯಿದ್ ಫಸಲ್ ಕೋಯಮ್ಮ ತಂಙಳರು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದವರು. ನಮ್ಮ ಸಮಾಜದ ಏಳಿಗೆಗಾಗಿ ಕೆಲಸ ಮಾಡಿರುವ ಈ ಎಲ್ಲಾ ಚೇತನಗಳ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ.”
BREAKING : ಬೆಂಗಳೂರಿನ ‘ನೈಸ್ ರೋಡ್’ ನಲ್ಲಿ ಭೀಕರ ಸರಣಿ ಅಪಘಾತ : ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ
HD ಕುಮಾರಸ್ವಾಮಿ ಸರ್ವಪಕ್ಷ ಸಭೆಗೆ ಬರದೇ ‘ಬಾಡೂಟಕ್ಕೆ’ ಹೋಗಿದ್ದು ದುರಂತ : ಸಚಿವ ಚೆಲುವರಾಯಸ್ವಾಮಿ