ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧವು ವಿಕೋಪಕ್ಕೆ ಹೋಗುತ್ತಿರುವ ಬೆನ್ನಲ್ಲೇ, ಭಾರತದ ಗುಜರಾತ್‌ಗೆ ಬರುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. “ವಾಣಿಜ್ಯ ನೌಕೆಗಳನ್ನು ಯುದ್ಧದ ಗುರಿಯಾಗಿಸಿಕೊಳ್ಳುತ್ತಿರುವುದು ಅತ್ಯಂತ ವಿಷಾದನೀಯ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಏನಿದು ಘಟನೆ?
ಯುಎಇನ ಖಲೀಫಾ ಬಂದರಿನಿಂದ ಗುಜರಾತ್‌ನ ಕಾಂಡ್ಲಾ ಬಂದರಿಗೆ ಬರುತ್ತಿದ್ದ ಥೈಲ್ಯಾಂಡ್ ಧ್ವಜ ಹೊಂದಿದ್ದ ‘ಮಯೂರಿ ನಾರಿ’ (Mayuree Naree) ಎಂಬ ಸರಕು ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಿಂದ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇಂಜಿನ್ ರೂಮ್‌ಗೆ ಹಾನಿಯಾಗಿದೆ.
ಭಾರತ ಸರ್ಕಾರದ ಕಳವಳ:
ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ:
ನಾಗರಿಕರ ಸಾವು: ಈ ಸಂಘರ್ಷದ ಆರಂಭದಿಂದಲೂ ಅನೇಕ ಅಮೂಯ ಭಾರತೀಯ ನಾಗರಿಕರು ಇಂತಹ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ.
ಸಂಚಾರ ಸ್ವಾತಂತ್ರ್ಯ: ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವುದು ಮತ್ತು ನಾಗರಿಕ ಸಿಬ್ಬಂದಿಗಳ ಜೀವಕ್ಕೆ ಅಪಾಯ ತರುವುದು ಸರಿಯಲ್ಲ.
ಕಟ್ಟುನಿಟ್ಟಿನ ಸೂಚನೆ: ಯಾವುದೇ ಕಾರಣಕ್ಕೂ ವಾಣಿಜ್ಯ ಹಡಗುಗಳನ್ನು ಮಿಲಿಟರಿ ಗುರಿಗಳನ್ನಾಗಿ ಮಾಡಬಾರದು ಎಂದು ಭಾರತ ಎಲ್ಲಾ ದೇಶಗಳಿಗೆ ಮನವಿ ಮಾಡಿದೆ.
ರಕ್ಷಣೆ ಮತ್ತು ಹಾನಿ:
ಹಡಗಿನಲ್ಲಿದ್ದ 23 ಸಿಬ್ಬಂದಿಗಳ ಪೈಕಿ 20 ಜನರನ್ನು ಒಮನ್ ನೌಕಾಪಡೆ ರಕ್ಷಿಸಿದೆ. ಆದರೆ, ಇಂಜಿನ್ ರೂಮ್‌ನಲ್ಲಿದ್ದ ಮೂವರು ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಭಾರತಕ್ಕೆ ಅಡುಗೆ ಅನಿಲ (LPG) ಮತ್ತು ಕಚ್ಚಾ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದೆ.








