ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟಿಸುತ್ತಿದೆ. ಈ ಹೊತ್ತಿನಲ್ಲೇ ಆರೋಗ್ಯ ಇಲಾಖೆಯಿಂದ ನಿಯಂತ್ರಣ ಕ್ರಮ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಡೆಂಗ್ಯೂ ಜ್ವರವು ವೈರಲ್ ಸೋಂಕುಗಳಲ್ಲಿ ಒಂದಾಗಿದೆ. ಡೆಂಗ್ಯೂ, ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಜಾತಿಯ ಸೊಳ್ಳೆಗಳಿಂದ ಡೆಂಗಿ ಜ್ವರವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿಸಿದೆ.
ರೋಗಲಕ್ಷಣಗಳು
ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಡೆಂಗ್ಯೂ ಜ್ವರ ಇದ್ದರೆ ವಿಪರೀತವಾಗಿ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ತೀವ್ರ ಜ್ವರ, ಕಣ್ಣಿನ ಗುಡ್ಡೆಯ ಹಿಂಭಾಗದಲ್ಲಿ ನೋವು, ತಲೆ ನೋವು , ಮೈ-ಕೈ ನೋವು , ಇವು ಡೆಂಗಿ ಜ್ವರದ ಸಾಮಾನ್ಯ ಲಕ್ಷಣಗಳಾಗಿವೆ. ಡೆಂಗಿ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಇಲ್ಲದಿರುವುದಿಂದ, ರೋಗ ಲಕ್ಷಣಗಳಿಗೆ ಅನುಸಾರವಾಗಿ ಚಿಕಿತ್ಸೆ ನೀಡಲಾಗುವುದು.
ಪ್ರಸ್ತುತ, 2024ನೇ ಸಾಲಿನಲ್ಲಿ ದಿನಾಂಕ: 13.5.2024ರವರೆಗೆ ರಾಜ್ಯದಲ್ಲಿ ಒಟ್ಟು 2877 ಖಚಿತ ಡೆಂಗಿ ಪ್ರಕರಣಗಳು ವರದಿಯಾಗಿವೆ. ಕಳೆದ ಸಾಲಿನ ಈ ಅವಧಿಯಲ್ಲಿ 1725 ಪ್ರಕರಣಗಳು ವರದಿಯಾಗಿದ್ದವು. ಅದರಂತೆ, 18597 ಹಾಗೂ 26476 ಸೀರಂ ಮಾದರಿಗಳನ್ನು ಕ್ರಮವಾಗಿ 2023 ಹಾಗೂ 2024ರಲ್ಲಿ ಪರೀಕ್ಷಿಸಲಾಗಿತ್ತು. ಶಂಕಿತ ಪ್ರಕರಣಗಳ ತಪಾಸಣೆ, ವರದಿ ಹಾಗೂ ಪರೀಕ್ಷೆಯ ಪ್ರಮಾಣದಲ್ಲಿನ ಏರಿಕೆಯ ಪರಿಣಾಮ ಡೆಂಗಿ ಪ್ರಕರಣಗಳಲ್ಲಿ ಹೆಚ್ಚಳವನ್ನು ಗಮನಿಸಲಾಗಿದೆ.
ಪ್ರಸಕ್ತ, ಪೂರ್ವ ಮುಂಗಾರು ಸಮಯವಾಗಿದ್ದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಗಾಗ್ಗೆ ಮಳೆಯಾಗುತ್ತಿರುವುದರಿಂದ, ಡೆಂಗಿ ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸಲು ಸೂಚಿಸಲಾಗಿದ್ದು, ಈ ಹಿನ್ನೆಲೆಯಲ್ಲಿ, ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ.
- ಡೆಂಗಿ ಜ್ವರ ನಿಯಂತ್ರಣ ಕ್ರಮಗಳ ಸನ್ನದ್ದತೆಯನ್ನು ಪರಿಶೀಲಿಸಲು ಅಭಿಯಾನ ನಿರ್ದೇಶಕರು – ರಾಷ್ಟ್ರೀಯ ಆರೋಗ್ಯ ಅಭಿಯಾನ, ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 6.5.2024 ರಂದು ಜಿಲ್ಲಾ ಆಕುಕ ಅಧಿಕಾರಿಗಳು ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಿಗೆ ಸಭೆಯನ್ನು ನಡೆಸಲಾಗಿದೆ.
- ಅದರಂತೆ. ಡೆಂಗಿ ಜ್ವರ ನಿಯಂತ್ರಣ ನಿಯಂತ್ರಣ ಕ್ರಮಗಳ ಅನುಷ್ಠಾನ ಹಾಗೂ ಅನುಪಾಲನೆಗಾಗಿ ಪ್ರತಿ ಸೋಮವಾರ ರಾಜ್ಯ ಕಾರ್ಯಕ್ರಮ ವಿಭಾಗದಿಂದ , ಜಿಲ್ಲಾ ಕಾರ್ಯಕ್ರಮಾಧಿಕಾರಿಗಳಿಗೆ ಸಭೆಯನ್ನು ನಡೆಸಲಾಗುತ್ತಿದೆ.
- ಈಡಿಸ್ ಸೊಳ್ಳೆಯ ಉತ್ಪತ್ತಿಯನ್ನು ತಡೆಗಟ್ಟಲು ಉತ್ಪತ್ತಿ ತಾಣ ನಾಶ ಚಟುವಟಿಕೆಯನ್ನು ಎಲ್ಲಾ ಹಂತಗಳಲ್ಲಿ ಗುಣಾತ್ಮಕವಾಗಿ ಕೈಗೊಂಡು, ಸದರಿ ಚಟುವಟಿಕೆಯ ಅಡ್ಡ ಪರೀಕ್ಷೆಯನ್ನು ನಡೆಸಿ , ಗುಣಾತ್ಮಕತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
- ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಿಗದಿತ ಸಂಖ್ಯೆಯ ಮನೆಗಳಿಗೆ ಪ್ರತಿದಿನ ಭೇಟಿ ನೀಡಿ , ಉತ್ಪತ್ತಿ ತಾಣ ನಾಶ ಚಟುವಟಿಕೆಯನ್ನು ಹಾಗೂ ಆರೋಗ್ಯ ಶಿಕ್ಷಣವನ್ನು ನೀಡುತ್ತಿದ್ದಾರೆ.
- ಜಿಲ್ಲಾಸ್ಪತ್ರೆಗಳಿಗೆ ದಾಖಲಾಗುವ ಖಚಿತ ಡೆಂಗಿ ಪ್ರಕರಣಗಳ ಮಾಹಿತಿಯನ್ನು ಪಡೆದು , ಅವುಗಳ ಅನುಪಾಲನೆ ನಡೆಸಲಾಗುತ್ತಿದೆ. ಸದರ ಪ್ರಕರಣಗಳ ಗ್ರಾಮ / ವಾರ್ಡ್ ಗಳಿಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಶಂಕಿತ ಪ್ರಕರಣಗಳಿದ್ದಲ್ಲಿ, ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
- ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ, ನೀರಿನ ಸಂಗ್ರಾಹಕಗಳನ್ನು ಮುಚ್ಚಿಡುವಂತೆ ಆರೋಗ್ಯ ಶಿಕ್ಷಣ ನೀಡುವುದು ಹಾಗೂ ಒಣಗಲು ದಿನ (Weekly Dry Day) ವನ್ನು ಆಚರಿಸಲಾಗುತ್ತಿದೆ.
- ಶಂಕಿತ ಡೆಂಗಿ ಜ್ವರ ಪ್ರಕರಣಗಳ ಪರೀಕ್ಷೆಗಾಗಿ ಎಲ್ಲಾ Sentinel Surveillance Laboratory ಗಳಲ್ಲಿ NS1 Antigen & IgM ಟೆಸ್ಟಿಂಗ್ ಕಿಟ್ ಗಳ ಲಭ್ಯತೆಯನ್ನು ಖಚಿತಪಡಿಸಲಾಗಿದೆ.
- ಡೆಂಗಿ ಪ್ರಕರಣಗಳ ಚಿಕಿತ್ಸೆ ಹಾಗೂ ನಿರ್ವಹಣೆಗೆ ಅಗತ್ಯ ಔಷಧಿಗಳು, ರೋಗವಾಹಕದ ನಿಯಂತ್ರಣಕ್ಕೆ ಲಾರ್ವಾನಾಶಕ ಹಾಗೂ ಫಾಗಿಂಗ್ ರಾಸಾಯನಿಕಗಳು ಎಲ್ಲಾ ಹಂತಗಳಲ್ಲೂ ಲಭ್ಯವಿದೆ.
- ಡೆಂಗಿ ಜ್ವರ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಪಾಲನೆಯ ಮಾಹಿತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ವಿವಿಧ ಮಾಧ್ಯಮಗಳ ಮೂಲಕ ಪ್ರಚುರಪಡಿಸಲಾಗುತ್ತಿದೆ.
- ದಿನಾಂಕ: 16.5. 2024 ರಂದು ರಾಷ್ಟ್ರೀಯ ಡೆಂಗಿ ದಿನ ( National Dengue Day) ವನ್ನು ಆಚರಿಸುತ್ತಿದ್ದು “Connect with community , Control Dengue / ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನು ನಿಯಂತ್ರಿಸೋಣ” ಎಂಬುದು 2024ನೇ ಸಾಲಿನ ಧ್ಯೇಯವಾಕ್ಯವಾಗಿದೆ. ಅದರಂತೆ, ಸಮುದಾಯ ಹಾಗೂ ಸರ್ಕಾರದ ಇಲಾಖೆಗಳ ಸಹಯೋಗದೊಂದಿಗೆ ಚಟುವಟಿಕೆಗಳನ್ನು ಕೈಗೊಳ್ಳಲು ಮಾರ್ಗಸೂಚಿ ಸುತ್ತೋಲೆಯನ್ನು ಹೊರಡಿಸಲಾಗಿದೆ.
- ಅವುಗಳ ಪೈಕಿ, Resident Welfare Associationನ ಮುಖ್ಯಸ್ಥರು, ಕಟ್ಟಡ ನಿರ್ಮಾಣ ಪ್ರದೇಶಗಳ ಮಾಲೀಕರು ಹಾಗೂ ವಾಣಿಜ್ಯ ಸಂಕೀರ್ಣಗಳ ಮಾಲೀಕರೊಂದಿಗೆ ಸಭೆಯನ್ನು ನಡೆಸಿ, ಡೆಂಗಿ ಜ್ವರ ನಿಯಂತ್ರಣದಲ್ಲಿ ಸದರಿಯವರ ಪಾತ್ರವನ್ನು ಮನವರಿಕೆ ಮಾಡಿಕೊಡಲಾಗುವುದು.
- ಇದೇ ಅಲ್ಲದೆ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಅಡ್ವೊಕೆಸಿ ಕಾರ್ಯಾಗಾರವನ್ನು ನಡೆಸುವುದರ ಮೂಲಕ, ಡೆಂಗಿ ನಿಯಂತ್ರಣದಲ್ಲಿ ಅಗತ್ಯ ಸಹಕಾರವನ್ನು ಪಡೆಯಲಾಗುವುದು.
ಒಟ್ಟಾರೆಯಾಗಿ, ಡೆಂಗಿ ನಿಯಂತ್ರಣ ಕ್ರಮಗಳ ಅನುಷ್ಟಾನವನ್ನು ರಾಜ್ಯ ಮಟ್ಟದಿಂದ ಅದರಂತೆ ಜಿಲ್ಲಾ ಮಟ್ಟದಿಂದಲೂ ಸಹ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರಸ್ತುತ, ರಾಜ್ಯದಲ್ಲಿ ಡೆಂಗಿ ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು, ಯಾವುದೇ ಸಾಂಕ್ರಾಮಿಕ ಸ್ಫೋಟ ( Outbreak) ವು ವರದಿಯಾಗಿರುವುದಿಲ್ಲ ಎಂದು ತಿಳಿಸಿದೆ.
ಡೆಂಗಿ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳು
- ಈಡಿಸ್ ಸೊಳ್ಳೆಗಳು ಮನೆಯಲ್ಲಿನ ಸ್ವಚ್ಛ ನೀರಿನ ಸಂಗ್ರಾಹಕಗಳಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ, ನಿಮ್ಮ ಮನೆಯಲ್ಲಿನ ತೊಟ್ಟಿ, ಬ್ಯಾರಲ್, ಡ್ರಮ್‌ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಿ ಪುನಃ ನೀರು ತುಂಬಿಸಬೇಕು ಮತ್ತು ಎಲ್ಲಾ ನೀರಿನ ಶೇಖರಣೆಗಳನ್ನು ಮುಚ್ಚಿಡಿ. ಫ್ರಿಡ್ಜ್ ಹಿಂಭಾಗದಲ್ಲಿ ಮತ್ತು ಹೂ ಕುಂಡ/ ಹೂ ಕುಂಡದ ಕೆಳಗಿನ ತಟ್ಟೆಗಳಲ್ಲಿ ( Pot saucers) ಶೇಖರಣೆಯಾಗುವ ನೀರನ್ನು ನಿಯಮಿತವಾಗಿ ಖಾಲಿ ಮಾಡಿ.
- ಮನೆ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ, ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಛವಾಗಿಡಿ.
- ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಬಳಸಬೇಕು.
- ಡೆಂಗಿ / ಚಿಕೂನ್‌ಗುನ್ಯ ರೋಗಿಗಳೂ ಸಹ ತಪ್ಪದೇ ಸೊಳ್ಳೆಯ ಪರದೆಯನ್ನು ಉಪಯೋಗಿಸುವುದು.
- ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆಧರಿಸಿ ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಮುಲಾಮು, ದ್ರಾವಣ ಇವುಗಳನ್ನು ಉಪಯೋಗಿಸಿ.
- ಎಲ್ಲಾ ಸರ್ಕಾರಿ / ಖಾಸಗಿ ಕಛೇರಿ ಹಾಗೂ ಸಂಸ್ಥೆಗಳ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
- ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
- ಶಂಕಿತ ಡೆಂಗಿ ಜ್ವರ ಪ್ರಕರಣಗಳ ಪರೀಕ್ಷೆ ಹಾಗೂ ಚಿಕಿತ್ಸೆಯು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ.
- ಈಡಿಸ್ ಲಾರ್ವಾ ಸಮೀಕ್ಷೆಗಾಗಿ ನಿಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ಅಗತ್ಯ ಸಹಕಾರವನ್ನು ನೀಡಿ, ಅವರು ನೀಡುವ ಸಲಹೆಗಳನ್ನು ಪಾಲಿಸುವುದು.
ವಿಜಯಪುರ : ಮೂರು ಮಕ್ಕಳ ಸಾವಿನ ಪ್ರಕರಣ : ಪಾಲಿಕೆ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ‘FIR’ ದಾಖಲು
ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ‘ಪಾಪಿ ತಂದೆ’