ಬೆಂಗಳೂರು : ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದು, ಡೆಂಘಿ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಡೆಂಘಿ ವಿರುದ್ಧ ಹೋರಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಳೆಗಾಲದ ದಿನಗಳಲ್ಲಿ ಡೆಂಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಮಳೆ ಬಂದು ಮನೆ ಸುತ್ತಮುತ್ತ ನೀರು ಶೇಖರಣೆಯಾದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗಿ ಡೆಂಗಿ ಹರಡಲು ಸಹಾಯಕವಾಗುತ್ತದೆ ಹಾಗೂ ವಾತಾವರಣದ ಉಷ್ಣಾಂಶವು ಕೂಡ ವೈರಾಣುಗಳ ಬೆಳವಣಿಗೆಗೆ ಹಾಗೂ ಡೆಂಗ್ಯೂ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗಿರುವುದರಿಂದ ಮಳೆಗಾಲದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ.
ಆದ ಕಾರಣ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಒಳಗಡೆಯೂ ನೀರನ್ನು ಸಂಗ್ರಹಿಸುವುದಾದರೆ ಅದರ ಮುಚ್ಚಳವನ್ನು ಮುಚ್ಚಿಟ್ಟಿರಬೇಕು. ಸೊಳ್ಳೆಗಳು ಕಚ್ಚದಂತೆ ಸಂಪೂರ್ಣವಾಗಿ ಮೈಮುಚ್ಚುವಂತಹ ಬಟ್ಟೆಯನ್ನು ಧರಿಸಬೇಕು ಇದರಿಂದ ಡೆಂಗಿ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ಸೊಳ್ಳೆಗಳು ಮನೆ ಒಳಗೆ ಬರದಂತೆ ಚಂಡು ಹೂವು, ಬೇವಿನ ಎಲೆ ಹಾಗೂ ಬೆಳ್ಳುಳ್ಳಿ ಸಿಪ್ಪೆಯ ಧೂಪನ (ಹೊಗೆಯನ್ನು) ಹಾಕುವುದರಿಂದ ಸೊಳ್ಳೆಗಳು ಮನೆ ಒಳಗೆ ಬರುವುದನ್ನು ತಪ್ಪಿಸಬಹುದು. ಈ ಸರಳ ಕ್ರಮಗಳಿಂದ ನಾವು ಡೆಂಗಿ ಬರದಂತೆ ತಡೆಯಬಹುದು.
ತೀವ್ರ ಜ್ವರ ತಲೆನೋವು ಕೈಕಾಲು ನೋವು ಲಕ್ಷಣಗಳು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಡೆಂಗಿ ಲಕ್ಷಣಗಳು ಆಯುರ್ವೇದದಲ್ಲಿ ಹೇಳಿರುವ ರಕ್ತ ದೋಷದಿಂದ ಆಗುವಂತಹ ರಕ್ತ ಪಿತ್ತ ಎಂಬ ಖಾಯಿಲೆಯ ಲಕ್ಷಣಗಳನ್ನು ಹೋಲುತ್ತವೆ. ವೈದ್ಯರು ನೀಡುವ ಚಿಕಿತ್ಸೆಯೊಂದಿಗೆ ಪಪ್ಪಾಯಿ ಎಲೆಯ ರಸ, ಈರುಳ್ಳಿರಸವನ್ನು ಮನೆಮದ್ದಾಗಿ ಬಳಸಿ. ಡೆಂಗಿ ಕಾಯಿಲೆಯು ವೈರಾಣುನಿಂದ ಬರುವ ಕಾರಣ ಅಮೃತಬಳ್ಳಿ ತುಳಸಿ ಇವುಗಳ ಎಲೆಯನ್ನು ಸೇವಿಸುವುದು ಜ್ವರ, ಮೈಕೈನೋವು ನಿಯಂತ್ರಿಸಲು ಸಹಾಯಕ. ಸತ್ವಯುತವಾದ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ, ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿ ಇಟ್ಟುಕೊಂಡಲ್ಲಿ ಯಾವುದೇ ಕಾಯಿಲೆ ಬರುವ ಸಾಧ್ಯತೆಗಳು ಕಡಿಮೆ ಆದಕಾರಣ ಉತ್ತಮವಾದ ಆಹಾರ, ಜೀವನ ಶೈಲಿಯನ್ನು ಪಾಲಿಸಿ ಆರೋಗ್ಯ ಕಾಪಾಡಿ ಕೊಳ್ಳಿ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.