ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 549 ಜನರಲ್ಲಿ ಡೆಂಗ್ಯೂ ಸೋಂಕು ಪತ್ತೆ, ಸೋಂಕಿಗೆ ಇಬ್ಬರು ಬಲಿಯಾಗಿದ್ದು ಈ ಮೂಲಕ ಒಟ್ಟು ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು. ಸೋಂಕಿತರ ಸಂಖ್ಯೆ 13,268ಕ್ಕೆ ಹೆಚ್ಚಳವಾಗಿದೆ. ನಾಲ್ವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ 668 ಮಂದಿ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 16 ಜನರು ಐಸಿಯುನಲ್ಲಿದ್ದಾರೆ ಎನ್ನಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 221, ಮಂಡ್ಯ 41, ಹಾಸನ 38, ಹಾವೇರಿ 28, ತುಮಕೂರು 27, ಬೀದರ್ನಲ್ಲಿ 25 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಡೆಂಗ್ಯೂ ಜ್ವರವು ವೈರಸ್ನಿಂದ ಉಂಟಾಗುವ ಖಾಯಿಲೆಯಾಗಿದ್ದು, ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಈಡಿಸ್ ಸೊಳ್ಳೆಯು ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಅವು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ತೀವ್ರ ಜ್ವರ ಮತ್ತು ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸ ಖಂಡ/ ಕೀಲುಗಳಲ್ಲಿ ವಿಪರೀತ ನೋವು ಡೆಂಗ್ಯೂ ಜ್ವರದ ಲಕ್ಷಣವಾಗಿದೆ . ತೀವ್ರ ಸ್ಥಿತಿಯ ಹಂತದಲ್ಲಿ ಬಾಯಿ, ಮೂಗು, ವಸಡುಗಳಲ್ಲಿ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಂಡು ಬರುತ್ತದೆ. ಈಡಿಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಡೆಂಗ್ಯು ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲವಾದರೂ ಸಹ ಲಕ್ಷಣಗಳಾಧರಿಸಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಹೊರತಾಗಿ ಸಾರ್ವಜನಿಕರು ಮನೆಯ ಒಳಗೆ ಸೊಳ್ಳೆ ಉತ್ಪತ್ತಿಯಾಗುವಂತಹ ಫ್ರಿಜ್ನ ಹಿಂಭಾಗ, ಅಲಂಕೃತವಾಗಿ ಬಳಸುವ ಮನಿಪ್ಲಾಂಟ್ ಕುಂಡಗಳು (ಬಾಟಲ್), ಸ್ನಾನಗೃಹದಲ್ಲಿ ಮುಚ್ಚಳ ಮುಚ್ಚಲು ಸಾಧ್ಯವಿಲ್ಲದ ಸಿಮೆಂಟ್ ತೊಟ್ಟಿಗಳಲ್ಲಿ ವಾರಕ್ಕೊಮ್ಮೆ ನೀರು ಖಾಲಿ ಮಾಡಬೇಕು ಎಂದು ಹೇಳಿದ್ದಾರೆ. ಶಿಕ್ಷಕರು ಶಾಲೆ, ಅಂಗನವಾಡಿಗಳಲ್ಲಿ ಪ್ರಾರ್ಥನೆ ವೇಳೆ ಮಕ್ಕಳಿಗೆ ತಮ್ಮ ಮನೆಯಲ್ಲಿ ನೀರು ಸಂಗ್ರಹಾರಕಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸಿ ನೀರು ತುಂಬಿದ ನಂತರ ಮುಚ್ಚಳ ಮುಚ್ಚುವಂತೆ ಪಾಲಕರ ಮನವೊಲಿಸಲು ತಿಳಿಸಬೇಕು