ಬೆಂಗಳೂರು: ಇಂದು ದೆಹಲಿ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿತೇಂದ್ರ ಯಾದವ್, ಭಾಆಸೇ., ಮತ್ತು ಅಧಿಕಾರಿಗಳ ತಂಡವು ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ, ಭಾಆಸೇ., ಅವರನ್ನು ಕೆ.ಎಸ್.ಆರ್.ಟಿ.ಸಿ, ಕೇಂದ್ರ ಕಛೇರಿಯಲ್ಲಿ ಭೇಟಿ ನೀಡಿದರು.
ಕೆ ಎಸ್ ಆರ್ ಟಿ ಸಿ ನಿಗಮದಲ್ಲಿ ವಾಹನಗಳ ಸುಗಮ ಕಾರ್ಯಾಚರಣೆ, ವಾಹನಗಳ ತಾಂತ್ರಿಕ ನಿರ್ವಹಣೆ, ಡ್ಯೂಟಿ ರೋಟಾ ವ್ಯವಸ್ಥೆ, ಮುಂಗಡ ಆಸನ ಕಾಯ್ದಿರಿಸುವಿಕೆ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಕ್ರಮಗಳು, ಮಾಹಿತಿ ತಂತ್ರಜ್ಞಾನ ಉಪಕ್ರಮಗಳು, ಹೆಚ್.ಆರ್.ಎಂ.ಎಸ್., ಬಸ್ ನಿಲ್ದಾಣ/ ಘಟಕಗಳ ಕಾಮಗಾರಿ ಪದ್ಧತಿ, ಬಸ್ಸುಗಳ ಬ್ರ್ಯಾಂಡಿಂಗ್, ಬಸ್ಸುಗಳ ಪುನಶ್ವೇತನ ಕಾರ್ಯ, ಬಸ್ ನಿಲ್ದಾಣದ ಸ್ವಚ್ಛತೆ ಮತ್ತು ಇತರೆ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮುಖಾಂತರ ಮಾಹಿತಿ ನೀಡಿದರು.

ನಿಗಮದಲ್ಲಿನ ಹೆಚ್.ಆರ್.ಎಂ.ಎಸ್., ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ದೆಹಲಿ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವುದಾಗಿ ತಿಳಿಸಿದರು. ಬಸ್ಸುಗಳ ಪುನಶ್ಚೇತನ ಕಾರ್ಯಕ್ಕೂ ಸಹ ಮೆಚ್ಚುಗೆ ವ್ಯಕ್ತಪಡಿಸಿದರು. ಕೆ ಎಸ್ ಆರ್ ಟಿ ಸಿ ಉಪಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ದೆಹಲಿ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡವನ್ನು ನಿಯೋಜಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಇಬ್ರಾಹಿಂ ಮೈಗೂರ ಭಾಆಸೇ, ನಿರ್ದೇಶಕರು (ಮಾಹಿತಿ ತಂತ್ರಜ್ಞಾನ) ಮತ್ತು ದೆಹಲಿ ರಸ್ತೆ ಸಾರಿಗೆ ಸಂಸ್ಥೆಯ ಹನೀಶ್ ಮತ್ತು ದೇವೆಂದ್ರ ಪ್ರತಾಪ್ ಸಿಂಗ್, ಹಿರಿಯ ವ್ಯವಸ್ಥಾಪಕರು ಮತ್ತು ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.







