ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂಬತ್ತು ಎಸ್‌ಎಸ್‌ಎಲ್‌ಸಿ ಟಾಪರ್ ವಿದ್ಯಾರ್ಥಿಗಳಿಗೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ನವದೆಹಲಿಗೆ ಐದು ದಿನಗಳ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದಾರೆ.
ತಮ್ಮ ಗೃಹಕಚೇರಿಯಲ್ಲಿ ವಿದ್ಯಾರ್ಥಿಗಳನ್ನು ಭೇಟಿಮಾಡಿ ಅವರ ಅನಿಸಿಕೆಗಳನ್ನು ಆಲಿಸಿ ಎಲ್ಲರಿಗೂ ಪ್ರಯಾಣ ಸುಖಕರವಾಗಿರಲಿ ಎಂದು ಶುಭಹಾರೈಸಿದ್ದಾರೆ.
ವಿದ್ಯಾರ್ಥಿಗಳು ಇಂಡಿಯಾ ಗೇಟ್, ಕಮಲ ಮಂದಿರ, ಕುತುಬ್ ಮಿನಾರ್, ಕೆಂಪುಕೋಟೆ, ಕರ್ತವ್ಯ ಪಥ ಮತ್ತು ಸ್ವಾಮಿನಾರಾಯಣ ಮಂದಿರ ಮುಂತಾದ ರಾಷ್ಟ್ರದ ಪ್ರಮುಖ ಸ್ಮಾರಕಗಳು ಹಾಗೂ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಶಿಕ್ಷಕರೂ ಕೂಡ ಜೊತೆಯಾಗಿ ತೆರಳಲಿದ್ದಾರೆ. ಈ ತಂಡವು ಸೋಮವಾರ ಸಂಜೆ 5-30 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಈ ಶೈಕ್ಷಣಿಕ ಪ್ರವಾಸದ ಉದ್ದೇಶ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆ ಬೆಳೆಸುವುದಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೇರೇಪಿಸಲು ನಾವು ಉದ್ದೇಶಿಸಿದ್ದೇವೆ. ಹೊನ್ನಾಳಿಯ ಇಬ್ಬರು ಅಸಾಧಾರಣ ವಿದ್ಯಾರ್ಥಿಗಳನ್ನು ಸಹ ಸೇರಿಸಿಕೊಂಡು ಒಟ್ಟಾರೆ ಒಂಬತ್ತು ವಿದ್ಯಾರ್ಥಿಗಳನ್ನು ಕಳುಹಿಸಲಾಗುತ್ತಿದೆ. ಪ್ರಯಾಣ, ವಿಮಾನ ದರ ಹಾಗೂ ವಸತಿ ಸೇರಿದಂತೆ ಎಲ್ಲಾ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಲಾಗುವುದು ಎಂದರು.
ಈ ಸಾಧನೆ ಮಾಡಿದ ಮಕ್ಕಳನ್ನು ನೋಡುವುದರಿಂದ ಪ್ರಸ್ತುತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬ್ಯಾಚ್‌ಗೆ ಪ್ರೇರಣೆ ಸಿಗುತ್ತದೆ. ಅವರು ಕೂಡ ಶ್ರದ್ಧೆಯಿಂದ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ಗಳಿಸಲು ಪ್ರೋತ್ಸಾಹಿತರಾಗುತ್ತಾರೆ ಆದ್ದರಿಂದ ಈ ಪ್ರವಾಸ ಏರ್ಪಡಿಸಲಾಗಿದೆ ಎಂದರು.
ಈ ವೇಳೆ ವಿದ್ಯಾರ್ಥಿಗಳಾದ ಪಿ. ಮಂಜುನಾಥ್, ಧನುಷ್ ಬಿ.ಎನ್, ಪವನ್ ಕುಮಾರ್ ಕೆ.ಪಿ, ಜೇಷ್ಟಾ ಬಿ., ಅಮೃತಾ ಟಿ.ಎಂ., ಮಿಜ್ಬಾ ನಾಜ್, ಉಷಾ ಹೆಚ್., ಲತಾ ಹೆಚ್.ಎ. ಮತ್ತು ಯೋಗೇಶ್ವರಿ ಜೆ.ಬಿ ಅವರೊಂದಿಗೆ ಶಿಕ್ಷಕರಾದ ಬಿ. ಅರುಣ್ ಕುಮಾರ್ ಮತ್ತು ಕೆ.ಎಂ. ನಿಂಗಮ್ಮ ತೆರಳಲಿದ್ದಾರೆ.ಈ ಪ್ರವಾಸ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದತ್ತ ಒಂದು ಪ್ರೇರಣಾದಾಯಕ ಹೆಜ್ಜೆಯಾಗಿದೆ.
ಸಂಸದರಿಗೆ ಧನ್ಯವಾದ ಹೇಳಿದ ವಿದ್ಯಾರ್ಥಿಗಳು
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ದೆಹಲಿ ಶೈಕ್ಷಣಿಕ ಪ್ರವಾಸದ ವ್ಯವಸ್ಥೆ ಮಾಡಿದ ವಿಚಾರ ತಿಳಿದ ಕ್ಷಣವೇ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎಲ್ಲಾ ವಿದ್ಯಾರ್ಥಿಗಳು ಸಂಸದರನ್ನು ಭೇಟಿ ಮಾಡಿ, ಅವರೊಂದಿಗೆ ಮಾತುಕತೆ ನಡೆಸಿ, ತಮ್ಮ ಧನ್ಯವಾದಗಳನ್ನು ಸಲ್ಲಿಸಿದ್ದು ವಿಶೇಷವಾಗಿತ್ತು.
BREAKING: ಬೆಂಗಳೂರಲ್ಲಿ BMTC ಎಲೆಕ್ಟ್ರಿಕ್ ಬಸ್ಸಿಗೆ ಮತ್ತೊಬ್ಬ ಮಹಿಳೆ ಬಲಿ
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ರಾಜ್ಯದ ‘ಗ್ರಾಮ ಪಂಚಾಯ್ತಿ’ಗಳಲ್ಲಿ ಈ ಎಲ್ಲಾ ‘ಸೇವೆ’ಗಳು ಲಭ್ಯ
ವಾಟ್ಸಾಪ್ ಹೊಸ ವೈಶಿಷ್ಟ್ಯ ; ರಿಪ್ಲೈ ಮಾಡದ ಬಳಕೆದಾರರಿಗೆ ಸಂದೇಶ ಕಳುಹಿಸುವ ಮಿತಿ ಪರಿಚಯ








