ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನವರಿ 22 ರಂದು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
ಫೆಬ್ರವರಿ 5 ರಂದು ರಾಜಧಾನಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೆಹಲಿ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರಿಗೆ ಪಕ್ಷದ “ಮೇರಾ ಬೂತ್ ಸಬ್ಸೆ ಮಜ್ಬೂತ್” ಕಾರ್ಯಕ್ರಮದ ಅಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆಗಳನ್ನು ನೀಡಲಿದ್ದಾರೆ.
ಬುಧವಾರ ಮಧ್ಯಾಹ್ನ 1 ಗಂಟೆಗೆ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ ಎಂದು ನಮೋ ಆ್ಯಪ್ನ ರಾಷ್ಟ್ರೀಯ ಸಂಯೋಜಕ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಕುಲ್ಜೀತ್ ಸಿಂಗ್ ಚಾಹಲ್ ತಿಳಿಸಿದ್ದಾರೆ.
“ಮೇರಾ ಬೂತ್ ಸಬ್ಸೆ ಮಜ್ಬೂತ್” ಕಾರ್ಯಕ್ರಮದ ಅಡಿಯಲ್ಲಿ, ದೆಹಲಿಯ ಎಲ್ಲಾ 256 ವಾರ್ಡ್ಗಳ 13,033 ಬೂತ್ಗಳ ಪಕ್ಷದ ಕಾರ್ಯಕರ್ತರು ವಿಡಿಯೋ ಕರೆ ಮೂಲಕ ಪ್ರಧಾನಿಯವರ ಸಂದೇಶವನ್ನು ಆಲಿಸಲಿದ್ದಾರೆ. ಅವರಲ್ಲಿ ಕೆಲವರಿಗೆ ಮೋದಿ ಅವರೊಂದಿಗೆ ಸಂವಾದದಲ್ಲಿ ತೊಡಗುವ ಅವಕಾಶವೂ ಸಿಗುತ್ತದೆ ಎಂದು ಚಾಹಲ್ ಹೇಳಿದರು.
ದೆಹಲಿಯ ಬಿಜೆಪಿ ಚುನಾವಣಾ ಉಸ್ತುವಾರಿ ಬೈಜಯಂತ್ ಪಾಂಡಾ, ಸಹ ಉಸ್ತುವಾರಿಗಳಾದ ಅಲ್ಕಾ ಗುರ್ಜರ್ ಮತ್ತು ಅತುಲ್ ಗರ್ಗ್, ಪಕ್ಷದ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ್ ಮತ್ತು ರಾಷ್ಟ್ರ ರಾಜಧಾನಿಯ ಎಲ್ಲಾ ಸಂಸದರು, ಶಾಸಕರು ಮತ್ತು ಕೌನ್ಸಿಲರ್ಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಾದ ಜನತಾದಳ (ಯುನೈಟೆಡ್) ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಎಲ್ಲಾ 70 ಅಭ್ಯರ್ಥಿಗಳು ಮತ್ತು ಪ್ರಧಾನಿಯ “ಮನ್ ಕಿ ಬಾತ್” ಪ್ರಸಾರ ತಂಡದ ಸದಸ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಚಾಹಲ್ ಹೇಳಿದರು