ಶಿವಮೊಗ್ಗ : ಭದ್ರಾ ಜಲಾಶಯದಲ್ಲಿನ ನೀರನ್ನು ಜನವರಿ 03ರಿಂದ ಎಡದಂಡೆ ನಾಲೆಗೆ ಹಾಗೂ ಜನವರಿ 08ರಿಂದ ಎಡದಂಡೆ ನಾಲೆಗೆ ನಿರಂತರವಾಗಿ 120ದಿನಗಳ ಕಾಲ ನೀರನ್ನು ಹರಿಸಲು ಭದ್ರಾ ಜಲಾಶಯದ 88ನೇ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತ ನಿರ್ಣಯ ಕೈಗೊಳ್ಳಲಾಯಿತು.
ಇಂದು ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26ನೇ ಸಾಲಿನ ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಮಾತನಾಡಿ, ಮುಂದಿನ ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಆಗದಂತೆ ಅವಶ್ಯಕವಾಗಿರುವ ನೀರನ್ನು ಒದಗಿಸಲು ಮತ್ತು ನಗರ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವುದನ್ನು ಗಮನದಲ್ಲಿಟ್ಟುಕೊಂಡು ನೀರನ್ನು ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದವರು ನುಡಿದರು.
ಅಚ್ಚುಕಟ್ಟು ವ್ಯಾಪ್ತಿಯ ನಾಲೆ, ಕೆರೆಗಳಲ್ಲಿ ತುಂಬಿರುವ ಹೂಳನ್ನು ನರೇಗಾ ಯೋಜನೆಯಡಿ ತೆಗೆಯಿಸಬಹುದಾದರೂ ಪಟ್ಟಣ ಪ್ರದೇಶದ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿನ ನಾಲೆ, ಕೆರೆಗಳಲ್ಲಿನ ಹೂಳನ್ನು ತೆಗೆಯಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿರೀಕ್ಷೆಯಂತೆ ಸಕಾಲದಲ್ಲಿ ಜಲಾಶಯದಿಂದ ಹರಿಸುವ ನೀರು ನಿಗಧಿತ ಗುರಿ ತಲುಪುತ್ತಿಲ್ಲ. ಆದ್ದರಿಂದ ಪ್ರಾಧಿಕಾರದ ನೀರಾವರಿ ಇಂಜಿನಿಯರ್‌ರವರು ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಪ್ರಸ್ತಾವನೆಯನ್ನು ತಯಾರಿಸಿ ಕೂಡಲೇ ಸಲ್ಲಿಸಬೇಕು. ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಲಾಶಯದ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿನ ಸಾಗುವಳಿದಾರರಿಗೆ ಹಾಗೂ ಹೊಸದಾಗಿ ತೋಟ ಮಾಡಿರುವ ಬೆಳೆಗಾರರಿಗೆ ಇಂದಿನಿಂದಲೇ ನೀರಿನ ಅಗತ್ಯವಿದೆ. ವಿಳಂಬವಾದಲ್ಲಿ ಲಕ್ಷಾಂತರ ಅಡಿಕೆ ಗಿಡಗಳು ನಾಶವಾಗುವ ಸಂಭವವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೀರಿನ ಹರಿವನ್ನು ನಿಯಂತ್ರಿಸಿ, ನೀರನ್ನು ಒದಗಿಸಬಹುದಾದ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬೇಕು. -ಬಸವರಾಜಪ್ಪ, ರೈತ ಮುಖಂಡರು, ಶಿವಮೊಗ್ಗ.
ಗೋಂದಿ ಭಾಗದ ಕಾಲುವೆಗಳು ಎತ್ತರದ ಪ್ರದೇಶದಲ್ಲಿವೆ ಅಲ್ಲದೆ ಆ ಭಾಗದ ಕೆರೆ-ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರಿನ ಹರಿವು ಸಮರ್ಪಕವಾಗಿಲ್ಲದ ಕಾರಣ ಅಚ್ಚುಕಟ್ಟುದಾರರಿಗೆ ನೀರು ತಲುಪದಿರುವ ಬಗ್ಗೆ ಆಕ್ಷೇಪಣೆಗಳಿರುವುದನ್ನು ಗಮನಿಸಲಾಗಿದೆ. ಅಲ್ಲಿನ ಬೆಳೆಗಾರರಿಗೆ ಅಗತ್ಯವಿರುವಷ್ಟು ಪ್ರಮಾಣದ ನೀರನ್ನು ಸಕಾಲದಲ್ಲಿ ಒದಗಿಸಲು ಭದ್ರಾ ಇಂಜಿನಿಯರ್‌ರವರು ಪರಿಶೀಲಿಸಿ ಕ್ರಮ ವಹಿಸಬೇಕು ಎಂದರು.
ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ನಾಲೆಗಳ ದುರಸ್ತಿಗೆ ಈಗಾಗಲೇ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದೆ. ಇನ್ನಷ್ಟು ಅನುದಾನದ ಅಗತ್ಯವಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿದಲ್ಲಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಹಲವು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಹಾಗೂ ಪ್ರಸ್ತುತ ಶಿಥಿಲಾವಸ್ತೆಯಲ್ಲಿರುವ ನಾಲೆ, ದಂಡೆಗಳ ದುರಸ್ತಿಗೆ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಆರಂಭಿಸಿರುವುದು ರೈತರಲ್ಲಿ ಸಂತಸ ತಂದಿದೆ. ಅದಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳನ್ನು ರೈತ ಎ.ಬಿ.ಕರಿಬಸಪ್ಪ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ|| ಅಂಶುಮಂತ್ ಅವರು ಮಾತನಾಡಿ, ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಸಮೀಪದ ಸಾಗುವಳಿದಾರರಿಗೆ ನೀರು ದೊರೆಯುತ್ತಿರುವಂತೆಯೇ ದೂರದ ರೈತರ ಒಣಭೂಮಿಗೆ ನೀರು ಹರಿಸಬೇಕಾಗಿರುವುದು ಪ್ರಾಧಿಕಾರದ ಹೊಣೆಯಾಗಿದೆ. ನೈಸರ್ಗಿಕವಾಗಿ ದೊರೆಯುತ್ತಿರುವ ಅಮೂಲ್ಯ ಜಲವನ್ನು ಮಿತವಾಗಿ ಬಳಸಿಕೊಳ್ಳಬೇಕು. ಮಾನವೀಯ ನೆಲೆಯಲ್ಲಿ ಎಲ್ಲ ರೈತರ ಹಿತಸುಖ ಕಾಯುವ ನಿಟ್ಟಿನಲ್ಲಿ ಚಿಂತಿಸಬೇಕು. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ವ್ಯರ್ಥವಾಗಿ ಹರಿದು ಹೋಗುವಂತಾಗಬಾರದು. ನೀರಿನ ಮಿತಬಳಕೆ ಬಗ್ಗೆ ಎಲ್ಲರಲ್ಲೂ ಜಾಗೃತಿ ಇರಬೇಕು. ಪ್ರಾಧಿಕಾರದ ನಿರ್ಣಯಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಸಭೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡರ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ, ಆರ್.ಪ್ರಸನ್ನಕುಮಾರ್, ಅಭಿಯಂತರರಾದ ರವಿಕುಮಾರ್, ರವಿಚಂದ್ರ ಸೇರಿದಂತೆ ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳ ನೀರಾವರಿ ಇಲಾಖೆಯ ಅಧಿಕಾರಿಗಳು, ರೈತ ಮುಖಂಡರು ಭಾಗವಹಿಸಿದ್ದರು.
BREAKING: ಕರ್ನಾಟಕ CET 2026 ವೇಳಾಪಟ್ಟಿ ಪ್ರಕಟ: ಏಪ್ರಿಲ್ 22, 23 & 24ರಂದು ಪರೀಕ್ಷೆ ಫಿಕ್ಸ್ | KCET Exam-2026








