ಬೆಂಗಳೂರು: ಶಿಕ್ಷಕರ ವೃತ್ತಿ ಎಂಬುದು ದೊಡ್ಡ ಪವಿತ್ರವಾದಂತಹ ವೃತ್ತಿ. ನೀವು ಈ ಸಮಾಜವನ್ನು ಬೆಳೆಸುತ್ತಿದ್ದೀರಿ. ನೀವು ಪಾಠ ಮಾಡಿದ ಮಕ್ಕಳು ಸಮಾಜದಲ್ಲಿ ಎತ್ತರಕ್ಕೆ ಬೆಳೆದಾಗ ನಿಮಗೆ ಆಗುವಂತಹ ಸಂತೋಷಕ್ಕೆ ಮಿತಿಯಿರುವುದಿಲ್ಲ. ಇತಿಹಾಸವನ್ನು ಸೃಷ್ಟಿಸುವಂತಹ ಮಕ್ಕಳನ್ನು ನೀವು ತಯಾರಿಸಬೇಕು. ಇತಿಹಾಸ ಮರೆತವನು, ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ದೊಡ್ಡ ಕನಸು ಕಾಣುವಂತೆ ಮಕ್ಕಳನ್ನು ತಯಾರು ಮಾಡಬೇಕು. ದೊಡ್ಡ ಕನಸು ಕಾಣಲು ಶಿಸ್ತನ್ನು ಕಲಿಸಬೇಕು. ಪ್ರಾಥಮಿಕ ಶಾಲೆಯಲ್ಲಿ ನೀವು ಯಾವ ಬುನಾದಿ ಹಾಕುತ್ತೀರಿ, ಆ ಬುನಾದಿ ಕೊನೆಯವರೆಗೂ ಇರುತ್ತದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಹಾಗೂ ಸುವರ್ಣೋತ್ಸವ ಸಮಾರಂಭ ಮತ್ತು 55ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೊಂದಿಗೆ ಭಾಗವಹಿಸಿ ಮಾತನಾಡಿದರು.
ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ. ಈ ಮೂರರ ನೆನಪು ಮನುಷ್ಯತ್ವದ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಶಿಕ್ಷಣ ಕ್ಷೇತ್ರದಲ್ಲಿ ಗುರು ಸ್ಥಾನ ಪಡೆದುಕೊಂಡು ಈ ವೃತ್ತಿ ಆಯ್ಕೆ ಮಾಡಿಕೊಂಡ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳನ್ನು ತಿಳಿಸಿದರು.
ಶಿಕ್ಷಕರಿಗಾಗಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಹಾಗೂ ರಾಮೋಜಿಗೌಡರು ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿಯಿದೆ, ಇದರ ಬಗ್ಗೆ ಸರ್ಕಾರಕ್ಕೆ ಅರಿವಿದೆ. ನಿನ್ನೆ 56 ಸಾವಿರ ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಹಳ್ಳಿಗಳಲ್ಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಸಿಗಬೇಕು. ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ನಿಮ್ಮ ಶಿಕ್ಷಕರ ಸಂಘಕ್ಕೆ ಬೆಂಗಳೂರಲ್ಲಿ ಜಾಗವನ್ನು ಕೊಡಲು ಸರ್ಕಾರ ಸಿದ್ಧವಿದ್ದು, ನಮ್ಮ ಸರ್ಕಾರ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ದಿನಕ್ಕೊಂದು ಎಸಳು ಬೆಳ್ಳುಳ್ಳಿ ಸೇವಿಸಿ, ರೋಗಗಳಿಂದ ದೂರವಿರಿ: ಇಲ್ಲಿದೆ ಸಂಪೂರ್ಣ ಮಾಹಿತಿ
‘ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ’ ಮಾಡಬೇಕಿರೋದು ಕೇಂದ್ರ ಸರ್ಕಾರ: ಹಕ್ರೆಗೆ ಜಿ.ಟಿ.ಸತ್ಯನಾರಾಯಣ ತಿರುಗೇಟು








