ಬೆಂಗಳೂರು: ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಹಾಗೂ ಮಾನವೀಯ ಮೈಲಿಗಲ್ಲಾಗುವ ಮಹತ್ವಾಕಾಂಕ್ಷಿ “ಕುಸುಮ ಸಂಜೀವಿನಿ” ಯೋಜನೆಗೆ ಇಂದು ಅಧಿಕೃತವಾಗಿ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿದರು.
ಬೆಂಗಳೂರಿನ ನೆಹರು ತಾರಾಲಯದ ಸಿ.ವಿ. ವಿಶ್ವೇಶ್ವರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅತ್ಯಾಧುನಿಕ ರೋಗ ನಿರೋಧಕ (Prophylaxis) ಚಿಕಿತ್ಸೆ ಹಾಗೂ ರೋಗಿಗಳ ತುರ್ತು ಸಂಚಾರಕ್ಕಾಗಿ ಮೀಸಲಾದ ಉಚಿತ 108 ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.
ರಕ್ತಸ್ರಾವ ಉಂಟಾದ ನಂತರ ಚಿಕಿತ್ಸೆ ನೀಡುವ ಬದಲಾಗಿ, ರಕ್ತಸ್ರಾವವಾಗುವುದನ್ನೇ ತಡೆಯುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು, “ದೀರ್ಘಕಾಲದ ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆಯಿಂದ ಬಳಲುತ್ತಿರುವ ಹಿಮೋಫಿಲಿಯಾ ರೋಗಿಗಳಿಗೆ ಶಾಶ್ವತ ಪರಿಹಾರ ಮತ್ತು ಘನತೆಯ ಬದುಕು ಒದಗಿಸುವುದು ಈ ಯೋಜನೆಯ ಧ್ಯೇಯೋದ್ದೇಶವಾಗಿದೆ” ಎಂದರು.
ಹಿಮೋಫಿಲಿಯಾ ರೋಗಿಗಳು ಅನುಭವಿಸುತ್ತಿರುವ ದೈಹಿಕ ಮತ್ತು ಮಾನಸಿಕ ಸಂಕಷ್ಟದ ಬಗ್ಗೆ ಆಳವಾದ ಕಾಳಜಿ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿಗಳು, “ಸಣ್ಣ ಏಟುಗಳಾದರೂ ಜೀವಭಯದ ಪರಿಸ್ಥಿತಿ ಉಂಟಾಗುವ ಸ್ಥಿತಿ ಬದಲಾಗಬೇಕು, ಹೊಸ ರೋಗನಿರೋಧಕ ಚಿಕಿತ್ಸೆಯಿಂದ ರೋಗಿಗಳು ಸಾಮಾನ್ಯರಂತೆ ಸಕ್ರಿಯ ಜೀವನ ನಡೆಸಲು ಸಾಧ್ಯವಾಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ, ಯೋಜನೆ ಯಶಸ್ವಿಯಾಗಲು ಅಗತ್ಯವಿರುವ ಬೃಹತ್ ಅನುದಾನವನ್ನು ಸರ್ಕಾರ ಒದಗಿಸಿದೆ ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಮಾತನಾಡಿ, “ಹಿಮೋಫಿಲಿಯಾ ‘ಎ’ ರೋಗಿಗಳಿಗೆ ವಾರ್ಷಿಕವಾಗಿ ಸುಮಾರು ರೂ.5 ಲಕ್ಷ ವೆಚ್ಚವಾಗುವ ‘ಸಬ್ಕ್ಯುಟೇನಿಯಸ್’ (Subcutaneous) ಚುಚ್ಚುಮದ್ದನ್ನು ರಾಜ್ಯ ಸರ್ಕಾರ ಉಚಿತವಾಗಿ ಒದಗಿಸುತ್ತಿದೆ” ಎಂದು ತಿಳಿಸಿದರು.
“ಈ ಮೊದಲು ಪದೇಪದೇ ರಕ್ತನಾಳದ (Intra Venous) ಮೂಲಕ ನೋವಿನ ಇಂಜೆಕ್ಷನ್ ಪಡೆಯಬೇಕಾಗಿದ್ದ ರೋಗಿಗಳಿಗೆ ಈಗ ತಿಂಗಳಿಗೊಮ್ಮೆ ಚರ್ಮದ ಅಡಿಯಲ್ಲಿ ಸುಲಭವಾಗಿ ಪಡೆಯಬಹುದಾದ ಚಿಕಿತ್ಸೆ ಲಭ್ಯವಾಗುತ್ತದೆ” ಎಂದರು.
“ಸರ್ಕಾರ 42.55 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ 17 ಕೋಟಿ ರೂ. ಅನುದಾನವನ್ನು ಔಷಧಿಗಾಗಿ ಬಳಸಲಾಗುತ್ತಿದೆ. ಈಗಾಗಲೇ 2,600 ಹಿಮೋಫಿಲಿಯಾ ರೋಗಿಗಳನ್ನು ಗುರುತಿಸಿದ್ದು, 200 ಜನರಿಗೆ ಈ ಹೊಸ ಮಾದರಿಯ ಚುಚ್ಚುಮದ್ದು ನೀಡಿ ಪರೀಕ್ಷಿಸಲಾಗಿದೆ. ಈ ಯೋಜನೆ ಪರಿಣಾಮಕಾರಿಯಾಗಿರುವುದರಿಂದ ಇನ್ನೂ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ದವಿದೆ” ಎಂದು ಆರೋಗ್ಯ ಸಚಿವರು ತಿಳಿಸಿದರು.
“ಹಿಮೋಫಿಲಿಯಾ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಪಡೆಯುವಂತೆ 108 ಅಂಬ್ಯುಲೆನ್ಸ್ ಸೇವೆಯನ್ನು ಮನೆಬಾಗಿಲಿಗೆ ಒದಗಿಸಲಾಗುತ್ತಿದೆ. “ರಕ್ತಸ್ರಾವ ಮುಕ್ತ” (Zero Bleeds) ಹಾಗೂ “ಅಂಗವೈಕಲ್ಯ ಮುಕ್ತ” ಕರ್ನಾಟಕ ನಿರ್ಮಾಣ ಸರ್ಕಾರದ ಸಂಕಲ್ಪವಾಗಿದೆ. ಈ ಯೋಜನೆ ಯಶಸ್ವಿಗೊಂಡರೆ ನಮ್ಮ ಬದುಕು ಕೂಡ ಸಾರ್ಥಕವಾಗುತ್ತದೆ” ಎಂದು ತಮ್ಮ ಮಹತ್ವಾಕಾಂಕ್ಷಿ ಯೋಜನೆ ಕುರಿತು ದಿನೇಶ್ ಗುಂಡೂರಾವ್ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ, ಹಿಮೋಫಿಲಿಯಾ ರೋಗಿಗಳಿಗಾಗಿ ತಮ್ಮ ವೃತ್ತಿ ಜೀವನ ಮುಡಿಪಾಗಿಟ್ಟು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ನಾಡಿನ ವೈದ್ಯರಾದ ಡಾ. ಸುರೇಶ್ ಹನಗವಾಡಿ ಅವರನ್ನು ಹೆಮ್ಮೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿ, ತಮ್ಮ ಅನುಭವ ಹಂಚಿಕೊಂಡ ಅವರು, “ರೋಗನಿರೋಧಕ ಚಿಕಿತ್ಸೆಗೆ ಆದ್ಯತೆ ನೀಡಿರುವುದು ರೋಗಿಗಳ ಜೀವನದಲ್ಲಿ ಪರಿವರ್ತನಾತ್ಮಕ ಹೆಜ್ಜೆಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ, ರೋಶ್ ಫಾರ್ಮಾ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ರಾಜ್ವಿಂದರ್ (ರಾಜಿ) ಮೆಹ್ವಾನ್ ಅವರು ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಶ್ಲಾಘಿಸಿ, “ಸುಲಭವಾಗಿ ಚರ್ಮದ ಅಡಿಯಲ್ಲಿ ನೀಡಬಹುದಾದ ರೋಗನಿರೋಧಕ ಚಿಕಿತ್ಸೆಯಿಂದ ರೋಗಿಗಳು ಸಕ್ರಿಯ ಹಾಗೂ ಅಡೆತಡೆಯಿಲ್ಲದ ಜೀವನ ನಡೆಸಲು ಸಾಧ್ಯವಾಗುತ್ತದೆ. ಕುಟುಂಬಗಳ ಆರೋಗ್ಯ ವ್ಯವಸ್ಥೆಯ ಮೇಲಿನ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ” ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಮೋಫಿಲಿಯಾ ಅನುಭವಿಸುತ್ತಿರುವ ಬೆಂಗಳೂರಿನ 03 ಮಕ್ಕಳಿಗೆ ಸಾಂಕೇತಿಕವಾಗಿ ಚಿಕಿತ್ಸೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ನಿರ್ದೇಶಕರಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ನಿರ್ದೇಶಕರಾದ ಡಾ. ವಸಂತಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ತಜ್ಞರು ಉಪಸ್ಥಿತರಿದ್ದರು.








