ಬೆಂಗಳೂರು: ನಿಗಮ ಮಂಡಳಿ ಸದಸ್ಯ ಸ್ಥಾನ ನಿರೀಕ್ಷೆಯಲ್ಲಿ ಇದ್ದಂತ ಕಾರ್ಯಕರ್ತರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಗುಡ್ ನ್ಯೂಸ್ ನೀಡಿದ್ದಾರೆ. ಅದೇ ಒಂದು ವಾರದಲ್ಲಿ ನಿಗಮ ಮಂಡಳಿ ಸದಸ್ಯರ ನೇಮಕ ಮಾಡುವುದಾಗಿ ತಿಳಿಸಿದ್ದಾರೆ.
ಇಂದು ಸುದ್ದಿಗಾರರು ಕಾರ್ಯಕರ್ತರಿಗೆ ನಿಗಮ ಮಂಡಳಿ ಸದಸ್ಯತ್ವ ನೀಡಿಲ್ಲ ಯಾಕೆ ಎಂದು ಕೇಳಿದಾಗ, ಈಗಾಗಲೇ 3 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15 ಜನರಿಗೆ ಗ್ಯಾರಂಟಿ ಸಮಿತಿ ಜವಾಬ್ದಾರಿ ನೀಡಿದ್ದೇವೆ. ಪ್ರತಿ ಕ್ಷೇತ್ರಗಳಲ್ಲಿ 60 ಜನರನ್ನು ನಾಮನಿರ್ದೇಶನ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲಿ ನಿಗಮ ಮಂಡಳಿಗಳಲ್ಲಿ 600 ಸ್ಥಾನಗಳಿವೆ. ಇವುಗಳನ್ನು ಇನ್ನೊಂದು ವಾರದಲ್ಲಿ ಪ್ರಕಟಿಸುತ್ತೇವೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಹಾಗೂ ನಮ್ಮ ಪಕ್ಷ ರಾಜಕೀಯವಾಗಿ ವಿಭಾಗಿಸಿಕೊಂಡಿರುವ 40 ಜಿಲ್ಲೆಗಳಿಂದ ಸಹಿ ಸಂಗ್ರಹ ಮಾಡಲಾಗಿದೆ. ನಮ್ಮ ಕಾರ್ಯಕರ್ತರು ಬಹಳ ಪ್ರಾಮಾಣಿಕವಾಗಿ ಈ ಅಭಿಯಾನದಲ್ಲಿ ಕೆಲಸ ಮಾಡಿದ್ದಾರೆ. 8-10 ಕಡೆ ಹೊರತು ಪಡಿಸಿ, ಉಳಿದ ಎಲ್ಲಾ ಕಡೆಗಳಲ್ಲಿ ಚೆನ್ನಾಗಿ ಸಹಿ ಸಂಗ್ರಹಿಸಲಾಗಿದೆ. ಬೂತ್ ವಾರು ಸಹಿ ಸಂಗ್ರಹಿಸಲಾಗಿದ್ದು, ಜನರಲ್ಲಿ ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಹಿ ಸಂಗ್ರಹದ ಅರ್ಜಿಗಳನ್ನು ಇದೇ ತಿಂಗಳು 10ರಂದು ದೆಹಲಿಗೆ ರವಾನಿಸಲು ತೀರ್ಮಾನಿಸಲಾಗಿದೆ. ಈ ಅಭಿಯಾನದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಿರುವ ಜಿಲ್ಲಾಧ್ಯಕ್ಷರ ಜೊತೆ ವಿಮಾನದಲ್ಲಿ ಈ ಸಹಿ ಸಂಗ್ರಹಿಸಿರುವ ಅರ್ಜಿಗಳನ್ನು ದೆಹಲಿಗೆ ತಲುಪಿಸಲಾಗುವುದು. ನವೆಂಬರ್ ಮೂರನೇ ವಾರದಲ್ಲಿ (ನ.25) ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡಲು ಚಿಂತನೆ ನಡೆಸಲಾಗಿದೆ. ಈ ಅಭಿಯಾನವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಎಲ್ಲಿ ಅಭಿಯಾನ ಆಗಿಲ್ಲ, ಆ ಪ್ರದೇಶಗಳಲ್ಲಿ ಇನ್ನು ಮೂರ್ನಾಲ್ಕು ದಿನ ಕಾಲಾವಕಾಶ ನೀಡಿ ಮುಂದುವರೆಸಲು ಸೂಚಿಸಲಾಗುವುದು ಎಂದು ತಿಳಿಸಿದರು.








