ದಾವಣಗೆರೆ: ಜಿಲ್ಲೆ ನ್ಯಾಮತಿ ತಾಲ್ಲೂಕಿನ ಮಾದಾಪುರ ಗ್ರಾಮದ ಕೆರೆಯಲ್ಲಿ ಸ್ಥಳೀಯರು ಜೆಸಿಬಿ ಯಂತ್ರದ ಮೂಲಕ ಮಣ್ಣನ್ನು ತೆಗೆಯುವಾಗ ಶಾಸನ ಕಂಡು ಬಂದಿತ್ತು. ಈ ಸ್ಥಳಕ್ಕೆ ಭೇಟಿ ಕೊಟ್ಟು ಕ್ಷೇತ್ರ ಕಾರ್ಯ ಕೈಗೊಂಡ ಪುರಾತತ್ವ ಇಲಾಖೆಯು ಇದು ಬಾದಾಮಿ ಚಲುಕ್ಯರ ಶಿಲಾ ಶಾಸನ ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಕಮಲಾಪುರ ಹಂಪಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ.ಆರ್ ಶೇಜೇಶ್ವರ ಅವರು, ಮಾದಾಪುರ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿರುವಂತ ಶಿಲಾ ಶಾಸನವು, ಐದು ಆಡಿ ಉದ್ದವಿದ್ದು ಹಳೆಗನ್ನಡದ 17 ಸಾಲು ಶಾಸನವನ್ನು ಒಳಗೊಂಡಿದೆ. ಇದು ಕ್ರಿಶ. 7ನೇ ಶತಮಾನದ ಬಾದಾಮಿ ಚಲುಕ್ಯರ ಒಂದನೇ ವಿಕ್ರಮಾದಿತ್ಯನ (ಕ್ರಿ.ಶ.654-681) ಕಾಲದ ಶಾಸನವಾಗಿದೆ ಎಂದಿದ್ದಾರೆ.
ಒಂದನೇ ವಿಕ್ರಮಾದಿತ್ಯನು ರಾಜ್ಯವಾಳುತ್ತಿದ್ದಾಗ ಅವನ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪೂರ್ವ ಮರ್ಯಾದೆಯಿಂದ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದನ್ನು ಶಿಲಾ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಕೆರೆಯನ್ನು ನಿರ್ಮಿಸಿದ ಓಜರಿಗೆ ಆರು ಮತ್ತರು ಭೂಮಿಯನ್ನು ದಾನ ನೀಡಿರುವುದನ್ನು ಹಾಗೂ ಈ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತೆಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಶಾಸನ ಶೋಧನೆಯಿಂದ ಬಳ್ಳಾವಿ ಎಪ್ಪತ್ತು ಎಂಬ 70 ಗ್ರಾಮಗಳಿದ್ದ ಆಡಳಿತ ವಿಭಾಗದ ಪ್ರಾಚಿನತೆಯನ್ನು ಹಾಗೂ ಈ ಶಾಸನವು 1344 ವರ್ಷಗಳ ಪುರಾತನವಾದದ್ದು ಎಂದು ತಿಳಿಸುತ್ತದೆ. ಈ ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿ.ಶ.17ನೇ ಶತಮಾನದಲ್ಲಿ ಅಪೂರ್ಣ ಉಬ್ಬು ಶಿಲ್ಪವಿದೆ ಎಂದಿದ್ದಾರೆ.
ಈ ಶಾಸನವನ್ನು ಓದಿಕೊಟ್ಟ ಪ್ರೋ.ಶ್ರೀನಿವಾಸ ಪಾಡಿಗರ, ರಮೇಶ ಹಿರೆಜಂಬೂರು ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಡಾ.ರವಿಕುಮಾರ ನವಲಗುಂದ, ಮಂಜಪ್ಪ ಚುರ್ಚಿಗುಂಡಿ ಮಾದಪುರ ಗ್ರಾಮದ ಗ್ರಾಮ ಲೆಕ್ಕಿಗರಾದ ವಿಶ್ವನಾಥ ಹಾಗೂ ಗ್ರಾಮಸ್ಥರಾದ ಬುಜಂಗ, ವೀರೇಶ್ ಇತರರಿಗೆ ಡಾ.ಆರ್.ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರೇ ನೀವು ಮತ್ತೊಬ್ಬರ ಗೊಬೆಲ್ಸ್ ಆಗಬೇಡಿ: ಮಾಜಿ ಸಚಿವ ಎಸ್.ಸುರೇಶ್ ಕುಮಾರ್