ದಾವಣಗೆರೆ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈವರೆಗೂ ನಡೆದ ರಾಜ್ಯ ಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನ ಒಂದಕ್ಕಿಂತ ಒಂದು ವಿಭಿನ್ನವಾಗಿ ನಡೆದಿದ್ದು, ಫೆಬ್ರವರಿಯಲ್ಲಿ 3 ಮತ್ತು 4 ರಂದು ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ ನಡೆಯಲಿರುವ ಸಮ್ಮೇಳನ ಅತ್ಯಂತ ಮಹತ್ವ ಪಡೆದಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ನಗರದ ಮಾಹಾನಗರಪಾಲಿಕೆ ಆವರಣದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು, ಮಂಗಳೂರು, ಕಲ್ಬುರ್ಗಿ ಮತ್ತು ವಿಜಯಪುರ ಸೇರಿದಂತೆ ವಿವಿಧ ಜೆಲ್ಲೆಗಳಲ್ಲಿ ನಡೆದ ಸಮ್ಮೇಳನಗಳು ಅಭೂತಪೂರ್ವವಾಗಿ ನಡೆದಿವೆ. ಮಾತ್ರವಲ್ಲ, ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮ್ಮೇಳನದ ವಿವಿಧ ಸಮಿತಿಗಳು ಅತಿಥಿಗಳಿಗೆ ನೀಡಿದ ಅತಿಥ್ಯ ಮತ್ತೆ ಮತ್ತೆ ನೆನಪು ಮಾಡುತ್ತಿವೆ. ಅದಕ್ಕಿಂತ ಹೆಚ್ಚು ನೆನಪು ಮಾಡುವಂತ ದಾವಣಗೆರೆ ಸಮ್ಮೇಳನ ಆಗಬೇಕು. ಇದಕ್ಕೆಲ್ಲ ಜಿಲ್ಲೆಯ ಪತ್ರಕರ್ತರು ಟೊಂಕಕಟ್ಟಿ ನಿಲ್ಲಬೇಕೆಂದು ಕಿವಿಮಾತು ಹೇಳಿದರು.
ಮೈಸೂರಿನಲ್ಲಿ ನಡೆದ ಸಮ್ಮೇಳನ ದಸರಾ ವೈಭವದಂತೆ ನಡೆಯಿತು. ಅದೇ ರೀತಿಯಾಗಿ ಮಂಗಳೂರಿನಲ್ಲೂ ಅದ್ಧೂರಿಯಾಗಿ ನಡೆಯಿತು. ಇದಕ್ಕಿಂತ ಭಿನ್ನವಾಗಿ ದಾವಣಗೆರೆ ಸಮ್ಮೇಳನ ನಡೆಯಬೇಕೆಂಬುದು ನಮ್ಮ ಮನದಾಸೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ವೃತ್ತಿ ಬಾಂಧವರಿಗೆ ವಾರ್ಷಿಕ ಪ್ರಶಸ್ತಿ, ಇಲ್ಲಿನ ಸ್ಥಳೀಯ 60 ವರ್ಷ ಮೇಲ್ಪಟ್ಟವರನ್ನು ಸನ್ಮಾನ ಮಾಡಬೇಕೆಂದು ನಿರ್ಧರಿಸಲಾಗಿದೆ. ಇನ್ನು ಸಮ್ಮೇಳನ ಕೇವಲ 15 ದಿನ ಉಳಿದಿರುವುದರಿಂದ ಪ್ರತಿಯೊಂದು ಸಮಿತಿಗಳಿಗೆ ಮಹತ್ವದ ಜವಾಬ್ದಾರಿ ಇದೆ. ಪ್ರಮುಖವಾಗಿ ವಸತಿ, ಊಟೋಪಚಾರದಲ್ಲಿ ಯಾವುದೇ ತೊಂದರೆಯಾಗದಂತೆ ಸಮರ್ಥವಾಗಿ ನಿಭಾಯಿಸಬೇಕೆಂದು ಸಲಹೆ ನೀಡಿದರು.
ಸಮ್ಮೇಳನದ ಯಶಸ್ವಿಗೆ ಜಿಲ್ಲೆಯ ಪ್ರತಿಯೊಬ್ಬ ಪತ್ರಕರ್ತರು ಸ್ವಯಂಪ್ರೇರಿತವಾಗಿ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಾವುದೇ ಟೀಕೆ, ಟಿಪ್ಪಣಿ ಮಾಡದೆ ಒಗ್ಗಟ್ಟಿನಿಂದ, ಬದ್ಧತೆಯಿಂದ ಕೆಲಸ ಮಾಡಬೇಕೆಂದು ಸೂಚಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮಾತನಾಡಿ, ದಾವಣಗೆರೆಯಲ್ಲಿ ಸಮ್ಮೇಳನ ನಡೆಯಬೇಕೆಂದು ಹಠಕ್ಕೆ ಬಿದ್ದು, ತೆಗೆದುಕೊಂಡು ಬಂದಿದ್ದೇವೆ. ಯಾವುದೇ ಚ್ಯುತಿ ಬಾರದಂತೆ ಸಮ್ಮೇಳನ ಯಶಸ್ವಿಗೆ ಪ್ರತಿಯೊಬ್ಬರು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಚ್.ಬಿ.ಮಂಜುನಾಥ್, ಬಿ.ಎನ್.ಮಲ್ಲೇಶ್, ಮಂಜುನಾಥ ಗೌರಕ್ಕಳವರ, ಬಾ.ಮ.ಬಸವರಾಜಯ್ಯ, ಸದಾನಂದ ಹೆಗಡೆ, ಎಂ.ಬಿ.ನವೀನ್, ನಾಗರಾಜ ಬಡದಾಳ, ಮಲ್ಲಿಕಾರ್ಜುನ್ ಕಬ್ಬೂರು, ಆರ್.ರವಿಬಾಬು, ಕಾನಿಪ ಜಿಲ್ಲಾಧ್ಯಕ್ಷ ಮಂಜುನಾಥ ಏಕಾಬೋಟೆ, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಕಾನಿಪ ರಾಜ್ಯ ಸಮಿತಿ ಹಾಗೂ ಸಮ್ಮೇಳನದ ಸಂಚಾಲಕ ಕೆ.ಚಂದ್ರಣ್ಣ, ಖಜಾಂಚಿ ಎನ್.ವಿ.ಬದರಿನಾಥ್ ಸೇರಿದಂತೆ ಇನ್ನಿತರರಿದ್ದರು. ಸಭೆಯ ನಂತರ ಸಮ್ಮೇಳನದ ಹಣಕಾಸು, ವಸತಿ, ಆಹಾರ, ಆರೋಗ್ಯ, ಸಾರಿಗೆ ಸೇರಿದಂತೆ ವಿವಿಧ ಸಮಿತಿಗಳ ಸಮ್ಮೇಳನ ನಿರ್ವಹಣೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಯಿತು.
‘ಹಾನಗಲ್ ಪ್ರಕರಣ’ ದುಡ್ಡು ಕೊಟ್ಟು ಮುಚ್ಚಿಹಾಕಲು ಯತ್ನ: ಮಾಜಿ ಸಿಎಂ ‘ಬೊಮ್ಮಾಯಿ’ ಗಂಭೀರ ಆರೋಪ
BREAKING: ಮಣಿಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಅದ್ಧೂರಿ ಚಾಲನೆ