ಚಿಕ್ಕಮಗಳೂರು:ಗೊಲ್ಲರ ಬೀದಿಗೆ ಕೆಲಸಕ್ಕೆ ಹೋಗಿದ್ದ ದಲಿತ ಯುವಕನನ್ನು ಹಲ್ಲೆ ಮಾಡಿ ಆತನಿಂದ 20 ಸಾವಿರ ದಂಡವಾಗಿ ವಸೂಲಿ ಮಾಡಿದ್ದ ಪ್ರಕರಣದಲ್ಲಿ ನಾಲ್ಕು ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಉಳಿದ 11 ಜನರು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆದಿದೆ.ಅವರ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದಲ್ಲಿ.ಗ್ರಾಮದ ಗೊಲ್ಲರ ಬೀದಿಗೆ ದಲಿತ ಯುವಕ ಮಾರುತಿ ಜೆಸಿಬಿ ಜೊತೆ ಕೆಲಸಕ್ಕೆ ಬಂದಿದ್ದನು. ಮಾರುತಿ ದಲಿತ ಯುವಕ ಎಂದು ತಿಳಿಯುತ್ತಿದ್ದಂತೆ ಗೊಲ್ಲರ ಬೀದಿ ನಿವಾಸಿಗಳು ಆತನ ಮೇಲೆ ಹಲ್ಲೆ ನಡೆಸಿದ್ದರು.
ಈ ಸಂಬಂಧ ಜನವರಿ 2ರಂದು ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. 15ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ.
ಪ್ರಕರಣ ಸಂಬಂಧ ದಲಿತ ಸಂಘಟನೆ ಕಾರ್ಯಕರ್ತರು ಊರಿನ ತುಂಬಾ ಮೆರವಣಿಗೆ ನಡೆಸಿದ್ದರು. ಗೊಲ್ಲರಹಟ್ಟಿ ತುಂಬಾ ಓಡಾಡಿದ್ದರು.ಕೆಲ ದಲಿತ ಯುವಕರು ದೇವಸ್ಥಾನಕ್ಕೆ ಹೋಗಲೇ ಬೇಕು ಅಂತ ಪಟ್ಟು ಹಿಡಿದಿದ್ದರು.ಕೊನೆಗೆ ತಹಶೀಲ್ದಾರ್, ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಶಾಂತವಾಗಿದೆ.