ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಫಎಂಗಲ್ ಚಂಡಮಾರುತದ ಅಬ್ಬರ ಪರಿಣಾಮ, ರಾಜ್ಯದ ಮಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ, ಚಳಿಗಾಳಿ ಆರಂಭಗೊಂಡಿದೆ.
ಮಂಗಳೂರಿನಲ್ಲಿ ಇಂದು ಆರೇಂಜ್ ಅಲರ್ಟ್ ಅನ್ನು ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಯಾವುದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಮೀನುಗಾರಿಕೆಗೆ ತೆರಳಿದ್ದರೇ, ಕೂಡಲೇ ವಾಪಾಸಾಗುವಂತೆ ಮುನ್ಸೂಚನೆ ನೀಡಿದ್ದಾರೆ.
ಮಂಗಳೂರಿನ ಹಲವೆಡೆ ಸತತ ಒಂದು ಗಂಟೆಯಿಂದ ಭಾರೀ ಮಳೆಯ ಜೊತೆಗೆ ಸುಳಿಗಾಳಿ ಬೀಸುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಕತ್ತಲು ಕವಿದಂತೆ ಆಗಿದ್ದು, ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ.
ಇನ್ನೂ ಚಿಕ್ಕಬಳ್ಳಾಪುರದಲ್ಲಿ ಫೆಂಗಲ್ ಚಂಡಮಾರುತದ ಕಾರಣ ಬೀಸುತ್ತಿರುವಂತ ಗಾಳಿಯಿಂದಾಗಿ ಜಿಲ್ಲಾಧಿಕಾರಿಯ ಮನೆಯ ಬಳಿಯ ಬೃಹತ್ ಗಾತ್ರದ ಮರವೊಂದು ಧರೆಗೆ ಉರುಳಿ ಬಿದ್ದಿದೆ.
ಬುಡ ಸಹಿತ ರಸ್ತೆಗೆ ಅಡ್ಡಲಾಗಿ ಡಿಸಿ ಪಿಎನ್ ರವೀಂದ್ರ ಮನೆಯ ಬಳಿಯ ಮರ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ, ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಭೇಟಿ ನೀಡಿ ಮರ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇಂದು ರಾತ್ರಿ ಅರಬ್ಬಿ ಸಮುದ್ರ ತೀರದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಸಮುದ್ರ, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅರಬ್ಬೀ ಸಮುದ್ರದಲ್ಲಿ ಮೀನುಗಾರರು ಕಟ್ಟೆಚ್ಚರ ವಹಿಸಲು ತಿಳಿಸಿದೆ.
BREAKING: ರಾಜ್ಯ ಸರ್ಕಾರದಿಂದ ‘KMF ಎಂಡಿ’ಯಾಗಿ ‘KAS ಅಧಿಕಾರಿ ಬಿ.ಶಿವಸ್ವಾಮಿ’ ನೇಮಿಸಿ ಆದೇಶ