ಬಳ್ಳಾರಿ: ಪಾರದರ್ಶಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಯ ಮಾಹಿತಿ, ಸಹಾಯವಾಣಿ ಹಾಗೂ ಕುಂದುಕೊರತೆಗಳ ಬಗ್ಗೆ ಶಾಲೆ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಚುನಾವಣಾ ಆ್ಯಪ್‍ಗಳಾದ ವಿ.ಹೆಚ್.ಎ, ಸಕ್ಷಮ್, ಸುವಿಧಾ, ಸಿ-ವಿಜಿಲ್ ಮತ್ತು 1950 ಸಹಾಯವಾಣಿ ಕುರಿತಂತೆ ಜಾಗೃತಿ ಮೂಡಿಸಬೇಕು ಎಂದು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಯಾದ ಪಿ.ಎಸ್.ವಸ್ತ್ರದ್ ಅವರು ಸೂಚಿಸಿದರು.
ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಬಳ್ಳಾರಿ ನಗರದಲ್ಲಿ ಕಡಿಮೆ ಮತದಾನ ಕೇಂದ್ರಗಳ ಬಿ.ಎಲ್.ಓ ಮೇಲ್ವಿಚಾರಕರು, ಜಿಲ್ಲಾ ಮತ್ತು ತಾಲ್ಲೂಕು ಸ್ವೀಪ್ ತರಬೇತುದಾರರೊಂದಿಗೆ ಜಿಲ್ಲಾ ಪಂಚಾಯತ್‍ನ ನಜೀರ್ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಕಡಿಮೆ ಮತದಾನ ಕೇಂದ್ರಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಮತದಾರರ ಜಾಗೃತಿ ನಮೂನೆಗಳ ಮೂಲಕ ವಿಶೇಷವಾದ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.ಮತದಾನ ಕೇಂದ್ರಗಳಲ್ಲಿನ ಮೂಲ ಸೌಕರ್ಯಗಳ ಕುರಿತು ವಿಶೇಷ ಗಮನ ಹರಿಸಿ ಸಾರ್ವಜನಿಕರಿಗೆ, ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಬೇಕು ಎಂದರು.
2019 ರ ಲೋಕಸಭಾ ಚುನಾವಣೆಗಿಂತ ಶೇಕಡವಾರು ಮತದಾನ ಹೆಚ್ಚಿಸಲು ಹಲವಾರು ಸ್ವೀಪ್ ಚಟುವಟಿಕೆ ಕಾರ್ಯಕ್ರಮ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ವಹಿಸಲು ವಿಶೇಷ ಕಾಳಜಿ ವಹಿಸಬೇಕು ಎಂದರು.
ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು, ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಚುನಾವಣಾ ಜಾಗೃತಿ ಸ್ವೀಪ್ ಚಟುವಟಿಕೆಗಳು ಹಾಗೂ ಕಡಿಮೆ ಮತದಾನ ಕೇಂದ್ರಗಳಲ್ಲಿ ಶೇಕಡವಾರು ಮತದಾನ ಹೆಚ್ಚಿಸಲು ಕೈಗೊಂಡ ಕ್ರಮಗಳ ಕುರಿತು ಸಭೆಗೆ ವಿವರವಾದ ಮಾಹಿತಿ ನೀಡಿದರು.
ಬಳಿಕ ಲೋಕಸಭಾ ಚುನಾವಣೆ-2024 ರ ಅಂಗವಾಗಿ ಜಿಲ್ಲೆಯಲ್ಲಿ ಮತದಾರರಲ್ಲಿ ಚುನಾವಣಾ ಜಾಗೃತಿ ಸ್ವೀಪ್ ಚಟುವಟಿಕೆಗಳ ಅನುಷ್ಟಾನ ಹಾಗೂ ಮತದಾನ ಕೇಂದ್ರಗಳಲ್ಲಿನ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕಿನ ವಿವಿಧೆಡೆ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್, ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್‍ಸಾಬ್, ತಹಶೀಲ್ದಾರ ಗುರುರಾಜ, ತಾಪಂ ಇಒ ಮಡಗಿನ ಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.