ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಯ ಅಕ್ಕಿ ಅಕ್ರಮವಾಗಿ ಪಾಲಾಗುವುದನ್ನು ತಡೆಯಲು ಆಹಾರ ಇಲಾಖೆ ಈಗ ತಂತ್ರಜ್ಞಾನದ ಮೊರೆ ಹೋಗಿದೆ. ಪಡಿತರ ಗೋದಾಮುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಅಕ್ಕಿ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ಕಿ ಕಳ್ಳಸಾಗಾಟ ತಡೆಗಟ್ಟಲು ಸಗಟು ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ಜಿಪಿಎಸ್ ಆಧಾರಿತ ವಾಹನ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಈ ಇಡೀ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು 5 ಕೋಟಿ ರೂಪಾಯಿ ವೆಚ್ಚದಲ್ಲಿ ಕಮಾಂಡ್ ಕಂಟ್ರೋಲ್ ಕೇಂದ್ರಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ವೇಬ್ರಿಡ್ಜ್ ವ್ಯವಸ್ಥೆ
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಾಲ್ಕು ಗೋದಾಮುಗಳಲ್ಲಿ ಈಗಾಗಲೇ ವೇಬ್ರಿಡ್ಜ್‌ಗಳನ್ನು ಅಳವಡಿಸಲಾಗಿದೆ. ಉಳಿದಂತೆ ಬಾಡಿಗೆಗೆ ಪಡೆದಿರುವ ಉಗ್ರಾಣ ನಿಗಮ ಹಾಗೂ ಎಪಿಎಂಸಿ ಗೋದಾಮುಗಳಲ್ಲಿನ ವೇಬ್ರಿಡ್ಜ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ವಿಪಕ್ಷಗಳ ಒತ್ತಾಯ:
ಇದಕ್ಕೂ ಮುನ್ನ ಮಾತನಾಡಿದ ಟಿ.ಎ. ಶರವಣ ಅವರು, “ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದನ್ನು ತಡೆಯಲು ಸರ್ಕಾರಕ್ಕೆ ಇರುವ ಅಡೆತಡೆಗಳೇನು?” ಎಂದು ಪ್ರಶ್ನಿಸಿ, ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.








