ಬೆಂಗಳೂರು: ಎಲ್ಲ ಐಎಲ್ಐ, ಸಾರಿ ಪ್ರಕರಣಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಶುಕ್ರವಾರ ಕೋವಿಡ್ ಕುರಿತಂತೆ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ ಎಂದರು.
ಪ್ರತಿನಿತ್ಯ 7 ಸಾವಿರಕ್ಕೂ ಹೆಚ್ಚು ಟೆಸ್ಟ್ ಗಳನ್ನ ಮಾಡಲಾಗುತ್ತಿದೆ. ಕೋವಿಡ್ ಪಾಸಿಟಿವಿಟಿ ದರ ಶೇ 3.82 ರಷ್ಟಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಇನ್ನೂ ಇಳಿಮುಖಗೊಂಡಿಲ್ಲ. ಕೇರಳ ರಾಜ್ಯದಲ್ಲಿ ಈಗಾಗಲೇ ಕೋವಿಡ್ ನಲ್ಲಿ ಇಳಿಕೆಯ ಟ್ರೆಂಡ್ ಆರಂಭವಾಗಿದೆ. ಹೀಗಾಗಿ ಕೋವಿಡ್ ಪಾಸಿಟಿವ್ ಹೊಂದಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ವಯಸ್ಕರಲ್ಲಿ ಐಎಲ್ಐ ಸಾರಿ ಆರೋಗ್ಯ ಸಮಸ್ಯೆಗಳು ಕಂಡು ಬಂದರೆ ಕಡ್ಡಾಯವಾಗಿ ಕೋವಿಡ್ ತಪಾಸಣೆ ನಡೆಸಲು ಸೂಚಿಸಲಾಗಿದೆ. ಈ ಮೊದಲು ಈ ಪ್ರಕರಣಗಳಲ್ಲಿ 20 ರಲ್ಲಿ ಒಂದು ಮಾತ್ರ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗುತ್ತಿತ್ತು. ಇನ್ಮುಂದೆ ಎಲ್ಲ ಐ.ಎಲ್.ಐ ಇರೋರಿಗೆ ಕೋವಿಡ್ ಟೆಸ್ಟ್ ನಡೆಸುವಂತೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದರು.
ರೋಗ ಲಕ್ಷಣಗಳು ಇರುವವರ ಮೇಲೆ ನಿಗಾ ವಹಿಸಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಮನೆಯಲ್ಲಿ ಐಸೊಲೇಷನ್ ಆಗಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಹೇಳಲಾಗಿದೆ. ಕರ್ನಾಟಕದಲ್ಲಿ ಮುಂದಿನ ವಾರದಲ್ಲಿ ಕೋವಿಡ್ ಇಳಿಕೆಯ ಟ್ರೆಂಡ್ ಶುರುವಾಗಬಹುದು ಎಂದು ನೀರಿಕ್ಷಿಸಲಾಗಿದೆ. ಶನಿವಾರ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಕೆಲವು ಮಾರ್ಗದರ್ಶನ ನೀಡಿದ್ದಾರೆ. ಅವುಗಳನ್ನ ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂದು ಕೊರೋನಾ ಹೆಲ್ಪ್ ಲೈನ್ ಲೋಕಾರ್ಪಣೆ ಮಾಡಲಾಗುವುದು. ಎಂದು ಹೇಳಿದರು.