ಬೆಂಗಳೂರು: ಕೋವಿಡ್ ಅಕ್ರಮಗಳ ಕುರಿತಂತೆ ಜಸ್ಟೀಸ್ ಮೈಕಲ್ ಕುನ್ಹಾ ಅವರ ಆಯೋಗದ ವರದಿ ಅನುಷ್ಠಾನಕ್ಕೆ ಐಎಎಸ್ ಅಧಿಕಾರಿ ನೇತೃತ್ವದ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೋವಿಡ್ ಭ್ರಷ್ಟಾಚಾರದಲ್ಲಿ ಮಾಜಿ ಸಿಎಂ ಬಿಎಸ್ ವೈ, ಮತ್ತು ಶ್ರೀರಾಮುಲು ಪಾತ್ರವಿದ್ದು, ಇಬ್ಬರ ವಿರುದ್ಧ ಪ್ರಾಸಿಕ್ಯೂಷನ್ ಗೆ ವರದಿಯಲ್ಲಿ ಶಿಫಾರಸ್ಸು ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ವರದಿಯನುಸಾರ ಕ್ರಮ ಕೈಗೊಳ್ಳುವ ಬಗ್ಗೆ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
PPE ಕಿಟ್ ಖರೀಧಿ ವಿಚಾರದಲ್ಲಿ ಬಿಎಸ್ ವೈ ಹಾಗೂ ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ಅವರು ಭ್ರಷ್ಟಾಚಾರ ಎಸಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. 330 ರೂ ಗೆ ದೇಶದಲ್ಲಿ ಪಿಪಿಇ ಕಿಟ್ ನ ಮಾರುಕಟ್ಟೆ ಬೆಲೆ ಇದ್ದರೂ, ಚೀನಾ ಕಂಪನಿಯಿಂದ 2104 ರೂಪಾಯಿ ದುಬಾರಿ ಬೆಲೆಗೆ ಖರೀಧಿಸಿದ್ದಾರೆ. ಇದರಿಂದ 14 ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್ ಸಂದರ್ಭದಲ್ಲಿ ರಾಜ್ಯದ ಜನತೆ ಸಂಕಷ್ಟದಲ್ಲಿ ಇರುವಾಗ ಅಂದಿನ @BJP4Karnataka ಸರ್ಕಾರ ಲೂಟಿಗೆ ಇಳಿದಿದ್ದು ವಿಷಾದನೀಯ. ಪಿಪಿಇ ಕಿಟ್ ಖರೀದಿಯಲ್ಲೇ ಸುಮಾರು 14 ಕೋಟಿ ರೂಪಾಯಿ ಸರ್ಕಾರಕ್ಕೆ ನಷ್ಟವಾಗಿದೆ.
ಈ ಬಗ್ಗೆ ಅಂದೇ ನಾವು ಪ್ರತಿಭಟಿಸಿದ್ದೆವು. ಈಗ ನ್ಯಾಯಾಧೀಶರ ನೇತೃತ್ವದ ತನಿಖೆಯಲ್ಲಿ ಈ ಹಗರಣ ನಡೆದಿರುವುದು ಸಾಬೀತಾಗಿದ್ದು ಈ… pic.twitter.com/3PG3pdL9LH
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 9, 2024
ಕೋವಿಡ್ ಆತಂಕದಲ್ಲಿದ್ದ ಜನರು ಸಾವು ನೋವುಗಳ ವಿರುದ್ಧ ಹೋರಾಡುತ್ತಿದ್ದಾಗ ಹಣ ಲೂಟಿ ಹೊಡೆಯುವ ಮನಸಾದರೂ ಬಿಜೆಪಿ ನಾಯಕರಿಗೆ ಹೇಗೆ ಬಂತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವಿಚಾರದಲ್ಲಿ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡಲು ಬಯಸಲ್ಲ. ಪ್ರತಿಪಕ್ಷಗಳು ಅನಗತ್ಯವಾಗಿ ಕಾಂಗ್ರೆಸ್ ಮೇಲೆ ಮಾತನಾಡುತ್ತಿವೆ. ಅತ್ಯಂತ ಗೌರವಾನ್ವಿತರಾಗಿರುವ ಜಸ್ಟೀಸ್ ಕುನ್ಹಾ ಅವರ ವರದಿಯಲ್ಲಿ ಬಿಎಸ್ ವೈ, ಶ್ರೀರಾಮುಲು ವಿರಯದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸ್ಸು ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಕೋವಿಡ್ ಭ್ರಷ್ಟಾಚಾರದ ಬಗ್ಗೆ ವರದಿಯಲ್ಲಿ ಸಾಕಷ್ಟು ಅಂಶಗಳಿವೆ. 1500 ಪುಟಗಳ ಮಧ್ಯಂತರ ವರದಿಯನ್ನ ನೀಡಿದ್ದಾರೆ. ಹಲವು ಪ್ರಕರಣಗಳಲ್ಲಿ ಕಂಪನಿಗಳಿಂದ ಹಣ ರಿಕವರಿಗೆ ವರದಿಯಲ್ಲಿ ಸೂಚಿಸಲಾಗಿದೆ. ಈ ಪ್ರಕರಣಗಳನ್ನ ಸೂಕ್ತ ರೀತಿಯಲ್ಲಿ ಫಾಲೋ ಅಪ್ ಮಾಡಲು ಪ್ರತ್ಯೇಕ ಐಎಎಸ್ ಅಧಿಕಾರಿ ನೇತೃತ್ವದ ತಂಡ ರಚಿಸಲು ಮೊದಲ ಕ್ಯಾಬಿನೆಟ್ ಸಬ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬಿಎಸ್ ವೈ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ನಡೆಸುವ ಕುರಿತು ಮುಂದಿನ ಕ್ಯಾಬಿನೆಟ್ ಸಬ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಲಿದೆ. ಆತುರದ ನಿರ್ಧಾರಗಳಿಂದ ಕೆಲವೊಮ್ಮೆ ತಪ್ಪಿತಸ್ಥರು ಕೋರ್ಟ್ ಮೊರೆ ಹೋಗಿ ಟೆಕ್ನಿಕಲ್ ಅಂಶಗಳ ಆಧಾರದ ಮೇಲೆ ತಡೆಯಾಜ್ಞೆ ಪಡೆಯುತ್ತಾರೆ. ಕೋವಿಡ್ ನಲ್ಲಿ ಅಕ್ರಮ ಎಸಗಿದವರನ್ನ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ನಾವು ಬಿಡುವುದಿಲ್ಲ. ಹೀಗಾಗಿ ಅಳೆದು ತೂಗಿ ಸರ್ಕಾರ ತೀರ್ಮಾನಗಳನ್ನ ಕೈಗೊಳ್ಳುತ್ತಿದೆ. ಉಪ ಚುನಾವಣೆ ಮುಗಿದ ಬಳಿಕ ಕ್ಯಾಬಿನೆಟ್ ಸಬ್ ಕಮಿಟಿ ಸಭೆ ನಡೆಯಲಿದ್ದು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.