ಧಾರವಾಡ : ಹುಬ್ಬಳ್ಳಿಯ ಸುಳ್ಳ ರಸ್ತೆಯ ಶಿಕ್ಷಕರ ಕಾಲನಿಯ ಆದಿತ್ಯ ಪ್ರಭು ಅನ್ನುವವರು ತಮ್ಮ ತಂದೆ ಮಧನ ಪ್ರಭು ಹಾಗೂ ತಾಯಿ ಮಾನಿಶಾ ಪ್ರಭುರವರಿಗೆ ಎದುರುದಾರ ನವಿ ಜನರಲ್ ಇನ್ಸುರೆನ್ಸ್ ಕಂಪನಿಯಿಂದ 2022 ರಿಂದಆರೋಗ್ಯ ವಿಮೆ ಮಾಡಿಸಿದ್ದರು. ಅವರು ಅಗತ್ಯ ಪ್ರಿಮಿಯಮ್‍ಕಟ್ಟಿ ದಿ:16/06/2023 ರಿಂದ ದಿ:15/06/2024 ರವರೆಗೆ ಆ ವಿಮಾ ಪಾಲಸಿಯನ್ನು ನವೀಕರಿಸಿದ್ದರು. ದಿ:09/11/2023ರಂದು ದೂರುದಾರ ತಂದೆ ಮಧನ ಪ್ರಭುರವರಿಗೆ ಮನೆಯಲ್ಲಿ ಜಾರಿ ಬಿದ್ದು ಮೊಣಕಾಲಿನ ಮೂಳೆ ಮುರಿತವಾಗಿತ್ತು. ತಕ್ಷಣ ಅವರನ್ನು ಹುಬ್ಬಳ್ಳಿಯ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಅವರು ರೂ.2,20,000 ಕ್ಯಾಶ್‍ಲೆಶ್ ಕ್ಲೇಮು ಎದುರುದಾರರಿಗೆ ಸಲ್ಲಿಸಿದ್ದರು. ಎದುರುದಾರರು ಅದನ್ನು ತಿರಸ್ಕರಿಸಿದ್ದರು. ಆಸ್ಪತ್ರೆಯಿಂದ ದಿಸ್‍ಚಾರ್ಜ ಆದ ಮೇಲೆ ಎಲ್ಲ ದಾಖಲೆ ಪತ್ರಗಳ ಜೊತೆ ರೂ.1,80,000 ಆಸ್ಪತ್ರೆಯ ಖರ್ಚು ವೆಚ್ಚದ ಕ್ಲೇಮನ್ನು ದೂರುದಾರರು ಎದುರುದಾರ ವಿಮಾ ಕಂಪನಿಗೆ ಸಲ್ಲಿಸಿದ್ದರು.
ದೂರುದಾರ ತಂದೆ 10 ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಆ ಸಂಗತಿಯನ್ನು ವಿಮೆ ಪಡೆಯುವಾಗ ಅವರು ಮುಚ್ಚಿಟ್ಟಿದ್ದಾರೆ ಅಂತಾ ಕಾರಣ ನೀಡಿ ದೂರುದಾರ ಕ್ಲೇಮನ್ನು ವಿಮಾ ಕಂಪನಿಯವರು ತಿರಸ್ಕರಿಸಿದ್ದರು. ಅದರ ಜೊತೆ ವಿಮಾ ಪಾಲಸಿಯನ್ನು ರದ್ದು ಗೊಳಿಸಿದ್ದರು.
ದೂರುದಾರರ ವಿಮಾ ಪಾಲಸಿ ನವಂಬರ್ 2023ರಲ್ಲಿ ಚಾಲ್ತಿಯಿದ್ದು ಅದರ ನಿಯಮದಂತೆ ಅವರ ತಂದೆಯ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಖರ್ಚನ್ನು ಸಂದಾಯ ಮಾಡುವುದು ವಿಮಾ ಕಂಪನಿಯ ಆದ್ಯ ಕರ್ತವ್ಯವಾಗಿದೆ. ಆದರೆ ಅವರು ಕ್ಲೇಮನ್ನು ತಿರಸ್ಕರಿಸಿ ವಿಮಾ ಪಾಲಸಿಯನ್ನು ರದ್ದುಗೊಳಿಸಿರುವುದು ವಿಮಾ ನಿಯಮಕ್ಕೆ ವ್ಯತಿರಿಕ್ತವಾಗಿದೆ ಮತ್ತು ವಿಮಾ ಕಂಪನಿಯ ಅಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನೂನ್ಯತೆ ಆಗುತ್ತದೆ ಅಂತಾ ಹೇಳಿ ದೂರುದಾರರು ನವಿ ಜನರಲ್ ಇನ್ಸುರೆನ್ಸ್ ಕಂಪನಿಯ ವಿರುದ್ಧ ಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:25/03/2024 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಸದಸ್ಯರು ದೂರುದಾರರ ತಂದೆ-ತಾಯಿಯ ಆರೋಗ್ಯ ವಿಮೆ ದಿ:16/06/2023ರಿಂದ ದಿ:15/06/2024 ರವರೆಗೆ ನವೀಕರಣಗೊಂಡಿದೆ. ಅದಕ್ಕೆ ಅಗತ್ಯ ಪ್ರೀಮಿಯಮ್ ಹಣವನ್ನು ಎದುರದಾರರು ದೂರುದಾರರಿಂದ ಪಡೆದುಕೊಂಡಿದ್ದಾರೆ. ನವಂಬರ್-2023ರಲ್ಲಿ ಅಂದರೆ 09/11/2023ರಕ್ಕೆ ಆ ವಿಮಾ ಪಾಲಸಿ ಚಾಲ್ತಿಯಿರುವುದರಿಂದ ವಿಮಾ ನಿಯಮದಂತೆ ದೂರುದಾರರ ತಂದೆಯ ಚಿಕಿತ್ಸಾ ವೆಚ್ಚ ಭರಿಸುವ ಹೊಣೆಗಾರಿಕೆ ಎದುರುದಾರ ವಿಮಾ ಕಂಪನಿಯವರದಾಗಿರುತ್ತದೆ.
ಎದುರುದಾರರು ದಿ:06/02/2023ರಂದು ದೂರುದಾರರ ತಂದೆ-ತಾಯಿಯ ಆರೋಗ್ಯ ತಪಾಸಣೆ ಮಾಡಿಸಿದ್ದು ಅದರಲ್ಲಿ ಸಕ್ಕರೆ ಕಾಯಿಲೆಯ ಬಗ್ಗೆ ಯಾವುದೇ ದೂರುಗಳು ಇಲ್ಲ. ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಸಕ್ಕರೆ ಕಾಯಿಲೆ ಸರ್ವೆ ಸಾಮಾನ್ಯ. ಆ ಕಾರಣದಿಂದ ಆರೋಗ್ಯ ವಿಮಾ ಕ್ಲೇಮನ್ನು ತಿರಸ್ಕರಿಸಲು ಬರುವುದಿಲ್ಲ ಅಂತಾ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಿವೆ. ವಸ್ತು ಸ್ಥಿತಿ ಹೀಗಿದ್ದರು ದೂರುದಾರರ ತಂದೆಯ ವಿಮಾ ಕ್ಲೇಮನ್ನು ತಿರಸ್ಕರಿಸಿರುವ ಎದುರುದಾರ ನವಿ ಜನರಲ್ ಇನ್ಸುರೆನ್ಸ್ ಕಂಪನಿಯ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ದೂರುದಾರರ ತಂದೆಯ ಆಸ್ಪತ್ರೆಯ ಖರ್ಚು-ವೆಚ್ಚ ರೂ.1,80,000 ಮತ್ತು ಅದರ ಮೇಲೆ ಕ್ಲೇಮು ತಿರಸ್ಕರಿಸಿದ ದಿ: 14/11/2023 ರಿಂದ ಶೇ. 10 ರಂತೆ ಬಡ್ಡಿ ಆಕರಣೆ ಮಾಡಿ ದೂರುದಾರರಿಗೆ ಸಂದಾಯ ಮಾಡುವಂತೆ ಆಯೋಗ ಎದುರುದಾರ ವಿಮಾ ಕಂಪನಿಗೆ ನಿರ್ದೇಶಿಸಿದೆ. ಅಲ್ಲದೇ ದೂರುದಾರರ ವಿಮಾ ಪಾಲಸಿಯನ್ನು ಪುನರುಜ್ಜೀವನಗೊಳಿಸಿ ದೂರುದಾರರಿಗೆ ಲಾಭ ನೀಡುವಂತೆ ಆಯೋಗ ಹೇಳಿದೆ. ದೂರುದಾರ ಮತ್ತು ಅವರ ತಂದೆಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರ ನವಿ ವಿಮಾ ಕಂಪನಿಯವರು ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆದೇಶಿಸಿದೆ.
ಗೋಲ್ಟ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ರಾವ್ ಬಂಧನ ಪ್ರಕರಣ: 2ನೇ ಆರೋಪಿ ತರುಣಾ ರಾಜು ಜಾಮೀನು ಅರ್ಜಿ ವಜಾ