ಮಂಡ್ಯ : ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಪಾನಮತ್ತರಾಗಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ವರದಪುರ ಮೂಲದ ಧನಂಜಯ ಹಾಗೂ ಸಂಗಡಿಗರಿಗೆ ಮದ್ದೂರು ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯ ಬರೋಬ್ಬರಿ 69 ಸಾವಿರ ರೂಪಾಯಿ ದಂಡ ವಿಧಿಸಿದೆ.
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಭಾನುವಾರ ಸಂಜೆ ಸಂಚಾರಿ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದ್ದ ವೇಳೆ ಮೈಸೂರಿನಿಂದ ಬೆಂಗಳೂರು ಕಡೆಗೆ KA-53-MH-2566 ವಾಹನ ಸಂಖ್ಯೆಯ ಎರ್ಟಿಗಾ ಕಾರು ಚಾಲಕ ಪಾನಮತ್ತನಾಗಿ ಅತೀ ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತ ಇತರೆ ವಾಹನ ಚಾಲಕರಿಗೆ ಆತಂಕ ಸೃಷ್ಟಿಸುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಚಾಲಕ ಧನಂಜಯ ಹಾಗೂ ಕಾರಿನಲ್ಲಿದ್ದ ಇತರೆ ಐದು ಮಂದಿಯೂ ಸಹ ಪಾನಮತ್ತರಾಗಿ ತಪಾಸಣೆಗೂ ಸಹಕರಿಸದೆ ಸಂಚಾರಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ದೂರಿನ ಮೇರೆಗೆ ಮದ್ದೂರು ಸಂಚಾರಿ ಠಾಣೆ ಪೋಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡು ಚಾಲಕ ಹಾಗೂ ಆತನ ಸಂಗಡಿಗರ ವಿರುದ್ಧ ಸೆಕ್ಷನ್ 185, 184, 188, 179(1) (2), 177 ಮೊಕದ್ದಮೆ ದಾಖಲು ಮಾಡಿಕೊಂಡು ಮದ್ದೂರು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಿದ್ದರು. ಗುರುವಾರ ಬೆಳಿಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡ ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಿಯಾಂಕಾ ಅವರು ಕಾರು ಚಾಲಕ ಧನಂಜಯ ಹಾಗೂ ಸಂಗಡಿಗರಿಗೆ 69 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
Job Alert : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 364 `ಭೂಮಾಪಕರ’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ