ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು- ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿರುವುದು ಸ್ವಾಗತಾರ್ಹವಾದರೂ ಇದರಿಂದ ರಾಜ್ಯಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ. ಇದರ ಬದಲು ಬೆಂಗಳೂರು-ಪುಣೆ ನಡುವೆ ಇಂಥ ಕಾರಿಡಾರ್ ಬರಬೇಕು. ಇದಕ್ಕಾಗಿ ರಾಜ್ಯದ ಮತ್ತು ಮಹಾರಾಷ್ಟ್ರದ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ 2026-27ನೇ ಸಾಲಿನ ಬಜೆಟ್ ಬಗ್ಗೆ ಅವರು ಸುದ್ದಿ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ಈಗ ಘೋಷಿಸಿರುವ ಎರಡೂ ಮಾರ್ಗಗಳಲ್ಲಿ ರೈಲುಗಳು ಕರ್ನಾಟಕದೊಳಗೆ ನೂರು ಕಿಲೋಮೀಟರ್ ಕೂಡ ಓಡುವುದಿಲ್ಲ. ಇದನ್ನು ಮೋದಿ ಸರಕಾರವು ಪರಿಗಣಿಸಿಲ್ಲದೆ ಇರುವುದು ದುರ್ದೈವದ ಸಂಗತಿ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಘೋಣಿಸಿರುವ 5,600 ಕೋಟಿ ರೂಪಾಯಿ ನೆರವನ್ನು ಬಿಡುಗಡೆ ಮಾಡಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು. ಬಜೆಟ್ಟಿನಲ್ಲಿ ಇವುಗಳ ಪ್ರಸ್ತಾಪವೇ ಇಲ್ಲ. ಮಿಕ್ಕಂತೆ ರೈತ ಸಮುದಾಯಕ್ಕೆ ನೆರವಾಗುವಂತಹ ಒಂದು ಯೋಜನೆಯೂ ಇದರಲ್ಲಿ ಇಲ್ಲ ಎಂದು ಅವರು ಬೊಟ್ಟು ಮಾಡಿದ್ದಾರೆ.
ಈ ಬಜೆಟ್ ರಾಜ್ಯದ ಪಾಲಿಗೆ ಎಂದಿನಂತೆಯೇ ನಿರಾಶಾದಾಯಕವಾಗಿದೆ. ಆದರೆ, ಅದು ಪ್ರಕಟಿಸಿರುವ ವಿಶ್ವವಿದ್ಯಾಲಯ ಟೌನ್ ಶಿಪ್ ಗಳ ನಿರ್ಮಾಣ ಮತ್ತು 5 ಪ್ರಾದೇಶಿಕ ವೈದ್ಯಕೀಯ ಪ್ರವಾಸೋದ್ಯಮ ಹಬ್ ಅಭಿವೃದ್ಧಿ ಯೋಜನೆಗಳು ನಮ್ಮ ಕ್ವಿನ್ ಸಿಟಿ ಪರಿಕಲ್ಪನೆಯಿಂದ ಪ್ರಭಾವಿತವಾಗಿವೆ ಎಂದು ಅವರು ವಿಶ್ಲೇಷಿಸಿದ್ದಾರೆ.
ನಾವು ರಾಜ್ಯಕ್ಕೆ ಎರಡು ರಕ್ಷಣಾ ಕಾರಿಡಾರ್ ಯೋಜನೆಗಳನ್ನು ಮಂಜೂರು ಮಾಡಬೇಕು ಎಂದು ಕೋರಿದ್ದೆವು. ರಾಜ್ಯದಲ್ಲಿರುವ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ಕಾರ್ಯಪರಿಸರ ಅತ್ಯುತ್ತಮವಾಗಿರುವ ಹಿನ್ನೆಲೆಯಲ್ಲಿ ಇದನ್ನು ಬಜೆಟ್ಟಿನಲ್ಲಿ ಪರಿಗಣಿಸಬೇಕಾಗಿತ್ತು. ಆದರೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಚಕಾರವನ್ನೂ ಎತ್ತಿಲ್ಲ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.
ಕ್ವಿನ್ ಸಿಟಿ ಯೋಜನೆ ಒಟ್ಟು 5 ಸಾವಿರ ಎಕರೆಯಲ್ಲಿ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ 2 ಸಾವಿರ ಎಕರೆಯಲ್ಲಿ ಇದು ಅನುಷ್ಠಾನಗೊಳ್ಳುತ್ತಿದ್ದು, ಕೆಲಸಗಳು ಪ್ರಗತಿಯಲ್ಲಿವೆ. ಇಲ್ಲಿ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕ್ಯಾಂಪಸ್, ಗುಣಮಟ್ಟದ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ಎಲ್ಲವೂ ಬರಲಿವೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವು ಒಡಂಬಡಿಕೆಗಳು ಆಗಿವೆ. ಇನ್ನು ಎರಡು ವರ್ಷಗಳಲ್ಲಿ ಇವೆಲ್ಲವೂ ಸಂಪೂರ್ಣ ಜಾರಿಗೆ ಬರಲಿವೆ. ಕೇಂದ್ರ ಸರಕಾರವು ಬಜೆಟ್ಟಿನಲ್ಲಿ ಈಗ ಇಂತಹುದೇ ಯೋಜನೆಗಳನ್ನು ಘೋಷಿಸುವ ಮೂಲಕ ನಮ್ಮನ್ನು ಅನುಸರಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಯೋಫಾರ್ಮಾ ಹಬ್ ಯೋಜನೆ ಕೂಡ ನಮ್ಮ ಉಪಕ್ರಮಗಳ ಪ್ರತಿಫಲನವೇ ಆಗಿದೆ. ಇದಕ್ಕಾಗಿ ನಾವು ರಾಜ್ಯದಲ್ಲಿ ಪ್ರತ್ಯೇಕ ವಿಷನ್ ಗ್ರೂಪನ್ನೇ ರಚಿಸಿದ್ದೇವೆ. ಕೇಂದ್ರ ಸರಕಾರದ ಬಜೆಟ್ಟಿನಲ್ಲಿ ಕರ್ನಾಟಕದ ಅಭಿವೃದ್ಧಿ ಚಿಂತನೆಯ ಮಾದರಿಗಳನ್ನು ಅನುಕರಿಸುತ್ತಿರುವುದು ಸ್ಪಷ್ಟವಾಗಿದೆ. ತೆರಿಗೆ ಪಾಲು, ಕೈಗಾರಿಕಾ ಬೆಳವಣಿಗೆ ಇತ್ಯಾದಿಗಳಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿರುವ ರಾಜ್ಯಕ್ಕೆ ಕೇಂದ್ರ ಸರಕಾರವು ಹೆಚ್ಚು ಲಾಭದಾಯಕ ಯೋಜನೆಗಳನ್ನು ಕೊಡಬೇಕು ಎಂದು ಅಪೇಕ್ಷಿಸುವುದು ನಮ್ಮ ನ್ಯಾಯಬದ್ಧ ಹಕ್ಕಾಗಿದೆ ಎಂದು ಪಾಟೀಲ ಹೇಳಿದ್ದಾರೆ.








