ಮಂಡ್ಯ : ಮದ್ದೂರು ನಗರದ ಪೇಟೆ ಬೀದಿಯನ್ನು 80 ಅಡಿಗೆ ಅಗಲೀಕರಣ ಮಾಡುವ ಸಂಬಂಧ ರಸ್ತೆ ಕಾಮಗಾರಿಯೂ ಸರ್ಕಾರದ ಮಟ್ಟದಲ್ಲಿ ಅಂತಿಮ ಘಟ್ಟ ತಲುಪಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ರಸ್ತೆಯ ವಿವಿಧ ಸ್ಥಳಗಳಲ್ಲಿ ಪ್ರಮುಖ ವೃತ್ತಗಳನ್ನು ನಿರ್ಮಿಸಿ ದೇಶದ ಮಹಾನ್ ನಾಯಕರ ಪುತ್ತಳಿ ನಿರ್ಮಿಸಲು ಶಾಸಕ ಕೆ.ಎಂ.ಉದಯ್ ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಜೊತೆ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.
ಮದ್ದೂರು ನಗರದ ಕೊಪ್ಪ ವೃತ್ತ, ಕೊಲ್ಲಿ ವೃತ್ತ, ಹೂವಿನ ವೃತ್ತ, ಕೆಮ್ಮಣ್ಣು ವೃತ್ತ, ಸರ್ಕಾರಿ ಕಾಲೇಜು ವೃತ್ತ ಹಾಗೂ ಪ್ರವಾಸಿ ಮಂದಿರದ ವೃತ್ತದವರೆಗೆ ಶಾಸಕ ಉದಯ್ ಹಾಗೂ ಅರುಣ್ ಯೋಗಿ ರಾಜ್ ಅವರು ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮದ್ದೂರು ಪುರಸಭೆಯನ್ನು ರಾಜ್ಯ ಸರ್ಕಾರ ಈಗಾಗಲೇ ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಲಾಗಿದೆ. ಹೀಗಾಗಿ ನಗರದ ಪೇಟೆ ಬೀದಿಯನ್ನು 80 ಅಡಿಗೆ ಅಗಲೀಕರಣ ಮಾಡುವ ಜೊತೆಗೆ ಸಾರ್ವಜನಿಕರಿಗೆ ಅತ್ಯಾಧುನಿಕ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದ್ದು, ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ರಸ್ತೆ ಅಗಲೀಕರಣ ಮಾಡುವ ಜೊತೆಗೆ ಪ್ರವಾಸಿ ಮಂದಿರದ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ, ಸರ್ಕಾರಿ ಕಾಲೇಜು ವೃತ್ತದಲ್ಲಿ ಪೂಜ್ಯ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ, ಕೆಮ್ಮಣ್ಣು ನಾಲಾ ವೃತ್ತದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಹೂವಿನ ವೃತ್ತದಲ್ಲಿ ಅಮರ ಶಿಲ್ಪಿ ಜಕಣಾಚಾರಿ, ಕೊಲ್ಲಿ ವೃತ್ತದಲ್ಲಿ ಬಸವಣ್ಣ ಹಾಗೂ ಕೊಪ್ಪ ವೃತ್ತದಲ್ಲಿ ಕನಕದಾಸರ ಪ್ರತಿಮೆಗಳನ್ನು ನಿರ್ಮಿಸಲಾಗುವುದು ಈ ಪ್ರತಿಮೆಗಳ ನಿರ್ಮಾಣದ ಜವಾಬ್ದಾರಿಯನ್ನು ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರಿಗೆ ವಹಿಸಲಾಗಿದೆ ಎಂದು ಶಾಸಕ ಉದಯ್ ಹೇಳಿದರು.
ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ಮದ್ದೂರು ನಗರದ ರಸ್ತೆ ಅಗಲೀಕರಣಗೊಂಡ ಬಳಿಕ ಪ್ರಮುಖ ವೃತ್ತಗಳಲ್ಲಿ ವಿವಿಧ ಮಹಾನ್ ನಾಯಕರ ಪ್ರತಿಮೆಗಳನ್ನು ನಿರ್ಮಿಸಲು ಶಾಸಕ ಕೆ.ಎಂ.ಉದಯ್ ಅವರು ನನಗೆ ಮಹತ್ತರವಾದ ಜವಾಬ್ದಾರಿಯನ್ನು ನೀಡಿದ್ದಾರೆ.
ಶಾಸಕರ ಜೊತೆ ಮತ್ತೋಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡು ಕೆಲಸ ಪ್ರಾರಂಭಿಸಲಾಗುವುದು ಎಂದು ಅರುಣ್ ಯೋಗಿರಾಜ್ ತಿಳಿಸಿದರು.
ಇದೇ ವೇಳೆ ಮನ್ ಮುಲ್ ನಿರ್ದೇಶಕ ಹರೀಶ್ ಬಾಬು ನಗರಸಭಾ ಸದಸ್ಯ ಬಸವರಾಜ್ ಮುಖಂಡರಾದ ಕೆ.ಎಂ.ರವಿ, ಅಭಿಷೇಕ್, ಅಲೋಕ್, ಪ್ರಶಾಂತ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ನಕಲಿ ಐಡಿಗಳ ವಿರುದ್ಧ ರೈಲ್ವೆ ಸಮರ: 3.03 ಕೋಟಿ ಖಾತೆಗಳು ನಿಷ್ಕ್ರಿಯ, 2.7 ಕೋಟಿ ಖಾತೆ ಬಗ್ಗೆ ತನಿಖೆ
ಹೊಸ ಮನೆಗೆ ಬಾಗಿಲು ಹಾಕಿಸುವ ಮುನ್ನ ಈ ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ! ಯಾವ ರಾಶಿಗೆ ಯಾವ ದಿಕ್ಕಿನ ಬಾಗಿಲು ಗೊತ್ತಾ








