ಬೆಳಗಾವಿ: ಕ್ಯಾನ್ಸರ್ ರೋಗಕ್ಕೆ ತುತ್ತಾದವರು ಚಿಕಿತ್ಸೆಗಾಗಿ ಸದಾ ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ರಾಜ್ಯದ ಐದು ಕಡೆ ಕ್ಯಾನ್ಸರ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ಈ ಆಸ್ಪತ್ರೆಗಳ ಕಾರ್ಯಾರಂಭಕ್ಕೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ಸೋಮವಾರ ನಡೆದ ಕಲಾಪದಲ್ಲಿ ಸದಸ್ಯ ಎಂ.ನಾಗರಾಜ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಕಾರವಾರ, ಮಂಡ್ಯ, ಶಿವಮೊಗ್ಗ, ಮೈಸೂರು ಮತ್ತು ತುಮಕೂರಿನಲ್ಲಿ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆಯನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಒಂದು ವೇಳೆ ಸೂಕ್ತ ಕಡೆ ನಿವೇಶನ ಸಿಕ್ಕರೆ ಬೆಳಗಾವಿಯಲ್ಲಿ ಅತ್ಯಂತ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಮೊದಲು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್) ಯಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ತೆರೆಯಬೇಕೆಂಬ ಆಲೋಚನೆ ಸರ್ಕಾರದ ಚಿಂತನೆಯಲ್ಲಿತ್ತು. ಆದರೆ ಇಲ್ಲಿ ನಿವೇಶನ ಕೊರತೆ ಇತ್ತು ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಕಾನ್ಸರ್ ಆಸ್ಪತ್ರೆ ಆರಂಭಿಸುವ ಕುರಿತು ಒಬ್ಬೊಬ್ಬ ಶಾಸಕರು ಒಂದೊಂದು ರೀತಿಯ ಅಭಿಪ್ರಾಯವಿದೆ. ಎಲ್ಲರ ಅಭಿಪ್ರಾಯ ಪಡೆದು ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಕೊಡುತ್ತಿದ್ದೇವೆ. ಎಪಿಎಲ್ ಕಾರ್ಡ್‌ದಾರರಿಗೆ ಶೇ.30ರಷ್ಟು ಶುಲ್ಕ ತೆಗೆದುಕೊಳ್ಳುತ್ತಿದ್ದೇವೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ನಾವು ಗುಣಮಟ್ಟದ ಚಿಕಿತ್ಸೆ, ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಪ್ರತಿಯೊಂದು ಆಸ್ಪತ್ರೆಗಳಲ್ಲೂ ಶುಚಿತ್ವ, ಗುಣಮಟ್ಟದ ಚಿಕಿತ್ಸೆ, ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಈ ವಿಷಯದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಮಾಹಿತಿ ನೀಡಿದರು.
ಕಿದ್ವಾಯಿ ಆಸ್ಪತ್ರೆಯಲ್ಲಿ ವಿವಿಧ ಯೋಜನೆಯಡಿ ಚಿಕಿತ್ಸೆ ನೀಡುತ್ತಿದ್ದೇವೆ. ಬಿಪಿಎಲ್ ಕಾರ್ಡ್‌ದಾರರಿಗೆ ಅಯುಷ್ಮಾನ್ ಯೋಜನೆಯಡಿಯಲ್ಲಿ 5 ಲಕ್ಷ ರೂ.ವರೆಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಕ್ಯಾನ್ಸರ್ ಚಿಕಿತ್ಸೆ ನೀಡಲು ಉಪಕರಣ ಖರಿದೀಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 193 ಕೇಂದ್ರಗಳಲ್ಲಿ 763 ಡಯಾಲಿಸಿಸ್ ಯಂತ್ರ ಲಭ್ಯವಿದೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
BIG NEWS: 6 ರಿಂದ 10ನೇ ತರಗತಿಯ ಗಣಿತ, ವಿಜ್ಞಾನ ವಿಷಯದಲ್ಲಿ CBSE ಪಠ್ಯಕ್ರಮ ಅಳವಡಿಕೆ: ಸಚಿವ ಮಧು ಬಂಗಾರಪ್ಪ
ALERT : ಸಾರ್ವಜನಿಕರೇ ಎಚ್ಚರ : ಮೊಬೈಲ್ ನಲ್ಲಿ ಈ `ಗೇಮ್’ ಆಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗೋದು ಗ್ಯಾರಂಟಿ.!