ಬೆಂಗಳೂರು: ಬೆಂಗಳೂರಲ್ಲಿ ಶ್ವಾಸತಾಣಗಳನ್ನು ಉಳಿಸಲು, ಬೆಳೆಸಲು ಸರ್ಕಾರ ನಿರ್ಧರಿಸಿದ್ದು, ಯಲಹಂಕ ಬಳಿಯ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬೆಂಗಳೂರಿನಲ್ಲಿ ಲಾಲ್ ಬಾಗ್ ಹೈದರಾಲಿಯ ಕಾಲದಲ್ಲಿ ನಿರ್ಮಾಣವಾಗಿತ್ತು, ಕಬ್ಬನ್ ಪಾರ್ಕ್ ಬ್ರಿಟಿಷರ ಕಾಲದಲ್ಲಿ ರೂಪುಗೊಂಡಿತು. ಶತಮಾನವೇ ಕಳೆದರೂ ಮತ್ತೊಂದು ಬೃಹತ್ ಉದ್ಯಾನ ಬೆಂಗಳೂರಿನಲ್ಲಿ ಆಗಲಿಲ್ಲ. ಹೀಗಾಗಿ ತಾವು ಅರಣ್ಯ ಸಚಿವನಾದ ತರುವಾಯ ನೀಲಗಿರಿ ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿದ್ದ 153 ಎಕರೆ ಜಮೀನನ್ನು ಜೂ.2ರಂದು ಮರಳಿ ಅರಣ್ಯ ಇಲಾಖೆಗೆ ಪಡೆದು ಅಲ್ಲಿ ಉದ್ಯಾನ ನಿರ್ಮಿಸಲಾಗುವುದು ಎಂದರು.
8,848 ವನಮಹೋತ್ಸವ
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ಜಗತ್ತೇ ಎದುರಿಸುತ್ತಿದ್ದು, ಈ ಕಾಲಘಟ್ಟದಲ್ಲಿ ಹಸಿರು ಹೊದಿಕೆಯ ಹೆಚ್ಚಳ, ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಇಲಾಖೆಯ ಜವಾಬ್ದಾರಿಯಾಗಿದ್ದು, ಕಳೆದ 2 ವರ್ಷಗಳಲ್ಲಿ ಸುಮಾರು 8848 ವನಮಹೋತ್ಸವ ನಡೆಸಲಾಗಿದ್ದು, ಅರಣ್ಯ ಪ್ರದೇಶ, ರಸ್ತೆಬದಿ ಮತ್ತು ಸರ್ಕಾರಿ ಜಾಗದಲ್ಲಿ ಸುಮಾರು 8.5 ಕೋಟಿ ಸಸಿಗಳನ್ನು ನೆಟ್ಟು, ಪೋಷಿಸಲಾಗಿದೆ, 2023-24 ಮತ್ತು 2024-25ರ ಸಾಲಿನಲ್ಲಿ ಒಟ್ಟು 120975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ಹೊಸ ವೃಕ್ಷೋದ್ಯಾನ ಮತ್ತು 35 ದೇವರ ಕಾಡು ನಿರ್ಮಾಣ ಮಾಡಲಾಗಿದೆ ಎಂದು ವಿವರ ನೀಡಿದರು.
ಕಳೆದ 2 ವರ್ಷದಲ್ಲಿ ಕೃಷಿಕರಿಗೆ ತಮ್ಮ ಜಮೀನಿನಲ್ಲಿ ನಾಟಿ ಮಾಡಲು ಮತ್ತು ಇತರ ಜಮೀನಿನಲ್ಲಿ ನೆಡಲು ಒಟ್ಟಾರೆ 3.70 ಕೋಟಿ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.