ಬೆಂಗಳೂರು: 82 ವರ್ಷದ ಯಡಿಯೂರಪ್ಪ ಅವರ ಮೇಲೆ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದೆ. ರಾಜ್ಯದ ರೈತ ನಾಯಕ ಯಡಿಯೂರಪ್ಪ ಅವರ ಮೇಲೆ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಅವರನ್ನು ಜೈಲಿಗೆ ಕಳಿಸಲೇಬೇಕು ಎಂಬಂತೆ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿ ಯುವ ಕೆಲಸ ಮಾಡಲಾಗುತ್ತಿದೆ. ಅವರ ಪ್ರಯತ್ನ ಫಲಪ್ರದ ಆಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವರಾದ ಮೇಲೆ ರಾಜ್ಯಕ್ಕೆ ಮೊದಲ ಭೇಟಿ ಕೊಟ್ಟ ವೇಳೆ ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವ ಷಡ್ಯಂತ್ರ ಆಯಿತು ಈಗ ಯಡಿಯೂರಪ್ಪ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ ಆರಂಭವಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.
ನಾಲ್ಕು ತಿಂಗಳ ಹಿಂದಿನ ಪ್ರಕರಣ ಇದು. ಇವತ್ತು ಯಡಿಯೂರಪ್ಪ ಅವರ ಮೇಲೆ ಜಾಮೀನು ರಹಿತ ಕೇಸ್ ಹಾಕಲು ಹೊರಟಿದ್ದಾರೆ. ನಾವು ಎಂಟು ಸ್ಥಾನ ಗೆದ್ದಿದ್ದೀವಿ ಬೀಗುತ್ತಿದ್ದಾರೆ. ಹಾಸನದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಪೆನ್ ಡ್ರೈವ್ ಗಳನ್ನು ಹರಿಬಿಟ್ಟು ನೀಚ ರಾಜಕಾರಣ ಮಾಡಿದವರು ಇವರು. ಪೆನ್ ಡ್ರೈವ್ ಪ್ರಕರಣದಲ್ಲಿ ಆಡಿಯೋ ಬಂತಲ್ಲಾ, ಅದರ ಬಗ್ಗೆ ಏನು ಕ್ರಮ ತಗೊಂಡರು? ಸಿಡಿ ಶಿವು ಅವರೇ, ನಾನು ಕೇಂದ್ರ ಸಚಿವನಾಗಿದ್ದೇನೆ. ಈಗ ನಾನು ನಿಮ್ಮ ಮಟ್ಟಕ್ಕೆ ಇಳಿಯಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಹಾರ ನಡೆಸಿದರು.
ಪೊಕ್ಸೊ ಪ್ರಕರಣ, ಯಡಿಯೂರಪ್ಪ ಅವರಿಗೆ ಜಾಮೀನು, ನ್ಯಾಯ ಸಮ್ಮತ: ಬಸವರಾಜ ಬೊಮ್ಮಾಯಿ