ನವದೆಹಲಿ: ಈ ಹಿಂದೆ 400 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳಿಂದ ಸ್ಪರ್ಧಿಸುವ ಸ್ಥಿತಿಯಲ್ಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಏಪ್ರಿಲ್ 21) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರು ಪಕ್ಷವನ್ನು “ಅಸ್ಥಿರತೆಯ ಸಂಕೇತ” ಎಂದು ಕರೆದರು.
ರಾಜಸ್ಥಾನದ ಜಲೋರ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನರು ಕಾಂಗ್ರೆಸ್ ಅನ್ನು ಅದರ “ಪಾಪಗಳಿಗಾಗಿ” ಶಿಕ್ಷಿಸುತ್ತಿದ್ದಾರೆ ಎಂದು ಹೇಳಿದರು.
“ನೀವು ಪ್ರತಿ ಬಾರಿಯೂ ಬಿಜೆಪಿಗೆ ಆಶೀರ್ವಾದ ನೀಡಿದ್ದೀರಿ, ಈ ಬಾರಿಯೂ ಜಲೋರ್-ಸಿರೋಹಿ ಜನರು ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂದು ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ರಾಜಸ್ಥಾನದ ಅರ್ಧದಷ್ಟು ಭಾಗವು ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪಾಠವನ್ನು ಕಲಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಬಲವಾದ ಸರ್ಕಾರವನ್ನು ನೀಡಲು ಸಾಧ್ಯವಿಲ್ಲ ಎಂದು ರಾಜಸ್ಥಾನದ ದೇಶಭಕ್ತ ಜನರಿಗೆ ತಿಳಿದಿದೆ. ಅವರ ಸರ್ಕಾರ ರಿಮೋಟ್ ಕಂಟ್ರೋಲ್ ನಲ್ಲಿ ನಡೆಯುತ್ತಿತ್ತು. 2014 ಕ್ಕಿಂತ ಮೊದಲು ಇದ್ದ ಪರಿಸ್ಥಿತಿಗಳು ಮತ್ತೆ ಮರಳಲು ದೇಶ ಬಯಸುವುದಿಲ್ಲ” ಎಂದು ಪ್ರಧಾನಿ ಹೇಳಿದರು.
ನಂತರ ಸೋನಿಯಾ ಗಾಂಧಿ ಅವರನ್ನು ಉಲ್ಲೇಖಿಸಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಧೈರ್ಯವಿಲ್ಲದ ಕಾರಣ ಕೆಲವು ವಿರೋಧ ಪಕ್ಷದ ನಾಯಕರು ಲೋಕಸಭೆಯನ್ನು ತೊರೆದು ರಾಜ್ಯಸಭೆಗೆ ತೆರಳಿದರು ಎಂದು ಹೇಳಿದರು.