ಹಾವೇರಿ: ಮಹದಾಯಿ ಯೋಜನೆಗೆ ಕಾಂಗ್ರೆಸ್ ನವರಿಂದಲೇ ಹಿನ್ನಡೆಯಾಗಿದ್ದು, ಕರ್ನಾಟಕಕ್ಕೆ ಮಹಾದಾಯಿಯ ಹನಿ ನೀರನ್ನು ಕೊಡುವುದಿಲ್ಲ ಎಂದು 2009 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು. ಟ್ರಿಬ್ಯುನಲ್ ಮಾಡುವ ಅಗತ್ಯ ಇಲ್ಲದಿದ್ದರೂ ಟ್ರಿಬ್ಯುನಲ್ ಮಾಡಿದರು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿಚಾರವಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಹಾದಾಯಿ ಯೋಜನೆಗೆ ಹಿನ್ನಡೆ ಮಾಡಿದ್ದರೆ ಅದು ಕಾಂಗ್ರೆಸ್. ಮಹಾದಾಯಿ ಹನಿ ನೀರನ್ನು ರಾಜ್ಯಕ್ಕೆ ಕೊಡುವುದಿಲ್ಲ ಎಂದು ಹಿಂದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದರು. ಮಹದಾಯಿ ನೀರಿನ ಹಂಚಿಕೆಗೆ ಟ್ರಿಬ್ಯುನಲ್ ಮಾಡುವ ಅಗತ್ಯ ಇಲ್ಲದಿದ್ದರೂ ಟ್ರಿಬ್ಯುನಲ್ ಮಾಡಿದರು. ಟ್ರಿಬ್ಯುನಲ್ ಅಧ್ಯಕ್ಷರಿಗೆ ನಾಲ್ಕೈದು ವರ್ಷ ಒಂದು ಆಫೀಸ್ ಕೂಡಾ ಕೊಡಲಿಲ್ಲ, ವಿಳಂಬ ಮಾಡಿದರು. ಟ್ರಿಬ್ಯುನಲ್ ನಲ್ಲಿ ತಾವೇ ಬರೆದು ಕೊಟ್ಟು, ನಾವು ನಿರ್ಮಿಸಿದ ಇಂಟಲ್ ಲಿಂಕಿಂಗ್ ಕೆನಾಲ್ ಗೆ ಗೋಡೆ ಕಟ್ಟಿದರು ಇದೆಲ್ಲಾ ಇತಿಹಾಸದಲ್ಲಿದೆ ಎಂದು ಹೇಳಿದರು.
ಈಗ ವನ್ಯ ಜೀವಿ ಮಂಡಳಿಯ ಅನುಮತಿ ತೆಗೆದುಕೊಳ್ಳಬೇಕು. ಅದಕ್ಕೆ ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಉತ್ತರ ಕೊಟ್ಟಿದಾರೆ. ನಮಗೆ ಅನುಮತಿ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.
11 ವಿಧೇಯಕಗಳನ್ನು ವಾಪಾಸ್ ಕಳಿಸಿದ್ದಕ್ಕೆ ರಾಜ್ಯಪಾಲರ ವಿರುದ್ದ ರಾಜ್ಯ ಸರ್ಕಾರದಿಂದ ಕಾನೂನು ಹೋರಾಟ ಮಾಡುವ ಚಿಂತನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಹೋರಾಟ ಮಾಡಲು ಅವಕಾಶ ಇದೆ ಮಾಡಲಿ, ವಿಧೇಯಕಗಳನ್ನು ಯಾಕೆ ವಾಪಾಸ್ ಕಳಿಸಲಾಯಿತು ಎಂಬುದು ಬಹಿರಂಗ ಆಗುತ್ತದೆ. ಬೆಂಗಳೂರಿನಲ್ಲಿ ಬಿಲ್ಡಿಂಗ್ ಮೇಲೆ 40% ಹೆಚ್ಚಿಗೆ ಬಿಲ್ಡಿಂಗ್ ಕಟ್ಟಲು ಅನುಮತಿ ಕೊಟ್ಟಿದಾರೆ. ಅದಕ್ಕೆ ಅತ್ಯಂತ ಕಡಿಮೆ ದರ ನಿಗದಿ ಮಾಡಿದ್ದಾರೆ. ಹೀಗಾದಾಗ ಒಳಚರಂಡಿ,ರಸ್ತೆಗಳಿಗೆ ಎಲ್ಲಾ ಸಮಸ್ಯೆ ಆಗುತ್ತದೆ. ಅದು ನಗರಾಭಿವೃದ್ಧಿ ಇಲಾಖೆಯ ಕಾನೂನಿನ ವಿರುದ್ದ ಇದೆ. ನಾವು ಅಧಿಕಾರದಲ್ಲಿದ್ದಾಗ ಅದನ್ನು ತಿರಸ್ಕಾರ ಮಾಡಿದ್ದೆವು, ಸಾರ್ವಜನಿಕರ ಹಿತದೃಷ್ಟಿಯಿಂದ ವಿಧೇಯಕಗಳನ್ನು ವಾಪಸ್ ಕಳುಹಿಸಿದ್ದಾರೆ ಎಂದು ಹೇಳಿದರು.
ಇನ್ನು ಬೆಂಗಳೂರಿಗೆ ಶರಾವತಿ ನೀರು ತರುವ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಶರಾವತಿ ನದಿ ನೀರಿನ ಬಗ್ಗೆ ನಾನು ಏನೂ ಮಾತನಾಡಲ್ಲ. ಮಾತನಾಡುವುದಿಲ್ಲ ಅಂದರೆ ಅದಕ್ಕೆ ಅರ್ಥ ಇದೆ ಎಂದು ಹೇಳಿದರು.