ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ಚಟುವಟಿಕೆ ನಿಷೇಧದ ಕುರಿತು ಇಷ್ಟೊಂದು ಬೇಜವಾಬ್ದಾರಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರೆ, ಇದು ಅವರ ಮೂರ್ಖತನದ ಪ್ರದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಚಟುವಟಿಕೆ ನಿಷೇಧಕ್ಕೆ ಸಂಬಂಧಿಸಿದ ಪ್ರಿಯಾಂಕ್ ಖರ್ಗೆಯವರ ಪತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆ, ಕಾರ್ಯ ಚಟುವಟಿಕೆ ಕುರಿತು ಮಾಹಿತಿ ಕೊರತೆ ಇರುವವರು ಕೇವಲ ತಮ್ಮ ಪ್ರಚಾರಕ್ಕಾಗಿ ಚಟದಿಂದ ಮಾತನಾಡುವವರು ಇಂಥ ಹೇಳಿಕೆ ಕೊಡಲು ಸಾಧ್ಯ ಎಂದು ನುಡಿದರು.
ಹಿಂದೆ ಎರಡು ಮೂರು ಬಾರಿ ಇದೇರೀತಿ ಆರೆಸ್ಸೆಸ್ ಅನ್ನು ಕಾಂಗ್ರೆಸ್ ಪಕ್ಷ ನಿಷೇಧಿಸಿತ್ತು. ಅದೇ ಕಾಂಗ್ರೆಸ್ ಪಕ್ಷವು ನಿಷೇಧವನ್ನು ಹಿಂದಕ್ಕೆ ಪಡೆದ ಉದಾಹರಣೆ ದೇಶದ ಮುಂದೆ ಇದೆ ಎಂದು ವಿವರಿಸಿದರು. ಮತ್ತೊಮ್ಮೆ ಆರೆಸ್ಸೆಸ್ ನಿಷೇಧಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ತಿಳಿಸಿದರು.
ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ಆರೆಸ್ಸೆಸ್ ಚಟುವಟಿಕೆಯನ್ನು ಗಮನಿಸಿ, ಶ್ಲಾಘಿಸಿ ಅಂದಿನ ರಿಪಬ್ಲಿಕ್ ಡೇ ಪರೇಡ್‍ನಲ್ಲಿ ಆರೆಸ್ಸೆಸ್‍ಗೆ ಇದೇ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿತ್ತು ಎಂದು ಪ್ರಿಯಾಂಕ್ ಖರ್ಗೆಯವರಿಗೆ ನೆನಪಿಸಲು ಬಯಸುವುದಾಗಿ ಹೇಳಿದರು.
ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಂತೆ ಕಾಣುತ್ತಿದೆ. ಗಾಂಧಿ ಕುಟುಂಬವನ್ನು ಓಲೈಸುವ ನಿಟ್ಟಿನಲ್ಲಿ ಈ ರೀತಿ ಪತ್ರ ಬರೆದಂತೆ ಕಾಣುತ್ತಿದೆ ಎಂದು ವಿಶ್ಲೇಷಿಸಿದರು.
ಆರೆಸ್ಸೆಸ್ 100 ವರ್ಷ ಪೂರೈಸಿದ ಈ ಶುಭ ಘಳಿಗೆಯಲ್ಲಿ ದೇಶಾದ್ಯಂತ ಚಟುವಟಿಕೆ, ಪಥ ಸಂಚಲನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆಯವರು ಪತ್ರದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲದಕ್ಕೂ ಕಾಲ ಉತ್ತರ ಕೊಡಲಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿರುವುದು, ಗೂಂಡಾಗರ್ದಿ ನಡೆಯುತ್ತಿರುವುದು, ನಿಮ್ಮ ಜಿಲ್ಲೆಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ಆಗಿದೆ, ಬೆದರಿಸುವ ತಂತ್ರ ನಡೆಯುತ್ತಿದೆ; ಯಾವ ರೀತಿ ಮರಳು ಮಾಫಿಯ ನಡೆಯುತ್ತಿದ್ದು, ನೀವು ಸಚಿವರಾಗಿ ಇವೆಲ್ಲದರ ಕಡೆ ಗಮನ ಹರಿಸಿದರೆ ನಿಮ್ಮ ಜಿಲ್ಲೆಗೂ ಹೆಚ್ಚು ಅನುಕೂಲ. ರಾಜ್ಯಕ್ಕೂ ಅನುಕೂಲ ಆಗಬಹುದು ಎಂದು ಗಮನ ಸೆಳೆದರು.
ಗುಲ್ಬರ್ಗ ಜಿಲ್ಲೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಕಲ್ಯಾಣ ಕರ್ನಾಟಕದಲ್ಲಿ 30-35 ಸಾವಿರ ಶಿಕ್ಷಕರ ನೇಮಕಾತಿ ಆಗಿಲ್ಲವೆಂದು ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಬಹಿರಂಗವಾಗಿ ಹೇಳಿದ್ದಾರೆ. ಅದರ ಬಗ್ಗೆ ಚಿಂತಿಸಬೇಕು ಎಂದು ಒತ್ತಾಯಿಸಿದರು. ಸಚಿವರಾಗಿ ಯಾವುದನ್ನು ಗಮನಿಸಬೇಕೋ ಅದನ್ನು ಗಮನಿಸದೇ ಈ ರೀತಿ ಉಡಾಫೆಯಾಗಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ಸಿಎಂ ಪರಿಹಾರ ಘೋಷಣೆ ಮಾಡಿದರೆ ರೈತರ ಹೊಟ್ಟೆ ತುಂಬುವುದೇ?: ಬಿವೈ ವಿಜಯೇಂದ್ರ ಪ್ರಶ್ನೆ
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion