ಬಾಗಲಕೋಟೆ: ರಾಜ್ಯ ಕಾಂಗ್ರೆಸ್ ನಾಯಕರು ಜನರ ಸಮಸ್ಯೆಗೆ ಸ್ಪಂದಿಸದೆ ತಮ್ಮ ಕುರ್ಚಿ ಭದ್ರತೆಗೆ ಆಟ ಆಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಡಿನ್ನರ್ ಪಾಲಿಟಿಕ್ಸ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಡಿನ್ನರ್ ಆದರೂ ಮಾಡಲಿ, ಲಂಚ್ ಮಾಡಲಿ, ಅದು ಅವರ ಆಂತರಿಕ ವಿಚಾರ. ರಾಜ್ಯ ಇಷ್ಟು ಆರ್ಥಿಕವಾಗಿ ಸಂಕಷ್ಟದಲ್ಲಿ ಇದೆ. ಕಾನೂನು ಸುವ್ಯವಸ್ಥೆ ಹಾಳಾಗಿರುವ ಜೊತೆಗೆ ದಲಿತರ ಮೇಲೆ ದೌರ್ಜನ್ಯ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಶಿಷ್ಯವೇತನ ಸಿಗುತ್ತಿಲ್ಲ.
ರೈತರಿಗೆ ಪರಿಹಾರ ಸಿಗುತ್ತಿಲ್ಲ. ಬಾಣಂತಿಯರ ಸರಣಿ ಸಾವು ಆಗುತ್ತಿದೆ. ಅಗಾಧವಾಗಿರುವ ಸಮಸ್ಯೆಗಳು ಇರುವಾಗ. ಇವರು ಎಲ್ಲವನ್ನು ಬಿಟ್ಟು ತಮ್ಮ ರಾಜಕಾರಣವೇ ಮುಖ್ಯವಾಗಿದೆ. ಯಾರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಬಹಳ ಮಹತ್ವವಾಗಿದೆ. ಯಾವ ಉದ್ದೇಶಕ್ಕಾಗಿ ಜನ ಅವರನ್ನು ಆರಿಸಿ ಕಳಿಸಿದ್ದರೋ ಅದನ್ನು ಸಂಪೂರ್ಣ ಮರೆತು ತಮ್ಮ ಖುರ್ಚಿಯ ಭದ್ರತೆಯ ಆಟ ಆಡುತ್ತಿದ್ದಾರೆ ಹೊರತು. ರಾಜ್ಯದ ಜನರ ಸಂಕಷ್ಟು ದೂರ ಮಾಡಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಡಿಸಿಎಂ ಡಿಕೆಶಿವಕುಮಾರ್ ದೇಗುಲಗಳಿಗೆ ಭೇಟಿ ನೀಡಿ ಹೋಮ, ಹವನ ಮಾಡಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಎಲ್ಲಿಗೆಗಾದರೂ ಹೋಗಲಿ, ದೇವಸ್ಥಾನಕ್ಕಾದರೂ ಹೋಗಲಿ. ಅದು ಅವರ ವೈಯಕ್ತಿಕ ವಿಚಾರ. ಯಾವ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಧಾವಿಸಬೇಕಿತ್ತು ಅದನ್ನು ಮಾಡದೇ ಸರ್ಕಾರ, ಮಂತ್ರಿಗಳು. ಇವತ್ತು ಅವರವರ ವೈಯಕ್ತಿಕ, ಕುರ್ಚಿಗಾಗಿ ತಮ್ಮ ರಣನೀತಿಗಳನ್ನು ಮಾಡುತ್ತಿದ್ದಾರೆ. ಜನರು ಸಂಕಷ್ಟದಲ್ಲಿ ಇರುವುದನ್ನು ನಿರ್ಲಕ್ಷ್ಯ ಮಾಡಿರುವುದು ರಾಜ್ಯದ ನಮ್ಮ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಾರಂಭದಿಂದಲೂ ಮುಖ್ಯಮಂತ್ರಿ ಆಗುವ ಪ್ರಕ್ರಿಯೆಯಲ್ಲಿಯೇ ಮೊಳಕೆಯಲ್ಲೆ ಒಡಕಿದೆ, ಹೀಗಾಗಿ ಅದು ಬರುವ ದಿನಗಳಲ್ಲಿ ದೊಡ್ಡ ಪ್ರಮಾಣ ನಡೆಯಲಿದೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಉತ್ತರಿಸಿ, ನಮ್ಮನ್ನು ಬಿಡಿ, ಅವರ ಪಕ್ಷದ ಶಾಸಕರು ಅಭಿವೃದ್ಧಿಗೆ ಅವಕಾಶ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡಲಿ. ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿಗೆ ಹಣ ಇಲ್ಲ. ಒಂದು ವರ್ಷದಲ್ಲಿ ಅಭಿವೃದ್ಧಿಗಾಗಿ ಇದ್ದ 54 ಸಾವಿರ ಕೋಟಿ ರೂ. ತಮ್ಮ ರಾಜಕೀಯ ಲಾಭಕ್ಕಾಗಿ ಗ್ಯಾರಂಟಿಗಾಗಿ ಕೊಟ್ಟಿದ್ದಾರೆ. ಅದರಿಂದ ಆರ್ಥಿಕ ಸಂಕಷ್ಟ ಇದೆ. ಅದೇ ಕಾರಣಕ್ಕೆ ಹಾಲಿಗೆ ನೀರಿಗೆ, ಆಲ್ಕೊಹಾಲ್, ಸ್ಟ್ಯಾಂಪ್ ಪೇಪರ್, ಮೋಟರ್ ವೆಹಿಕಲ್ ಗೆ, ಪೆಟ್ರೋಲ್, ಡಿಸೇಲ್ ಗೆ ಎಲ್ಲದ್ದಕ್ಕೂ ತೆರಿಗೆ ಹಾಕಿದ್ದಾರೆ. ಇನ್ನೂ ಹಾಕುತ್ತಾರೆ. ಇದನ್ನು ನೋಡಿದರೆ ರಾಜ್ಯದಲ್ಲಿ 40 ಸಾವಿರ ಕೋಟಿ ರೂ. ವರ್ಷದಲ್ಲಿ ಅಧಿಕ ತೆರಿಗೆಯನ್ನ ಜನರ ಮೇಲೆ ಭಾರ ಹಾಕಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ತೆರಿಗೆ ಹಂಚಿಕೆ ಸಮರ್ಪಕವಾಗಿ ಬರುತ್ತಿಲ್ಲ ಎಂಬ ಕಾಂಗ್ರೆಸ್ ನವರ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಈಗಾಗಲೇ ಇದಕ್ಕೆ ನಮ್ಮ ಸಚಿವರು ಉತ್ತರ ಕೊಟ್ಟಿದ್ದಾರೆ. ತಮ್ಮ ತಪ್ಪು ಮರೆಮಾಚಲು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಹಣಕಾಸು ನಿರ್ವಹಣೆ, ಆಡಳಿತದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ನೈತಿಕತೆ ಇಲ್ಲ
ಗುತ್ತಿಗೆದಾರ ಸಚಿನ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಬಂಧನದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದೆ ನಮ್ಮ ಸರ್ಕಾರದಲ್ಲಿ ಈಶ್ವರಪ್ಪ ಅವರದ್ದು ಏನೂ ಪಾತ್ರ ಇರಲಿಲ್ಲ. ಆದರೆ, ತನಿಖೆ ಮುಕ್ತವಾಗಿರಬೇಕು ಎಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಇವತ್ತು ಅದೆಲ್ಲವನ್ನು ಗಾಳಿಗೆ ತೂರಿ ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಹಲವಾರು ವಿಚಾರಗಳು ಸಾರ್ವಜನಿಕರಿಗೆ ಬರುತ್ತಿವೆ. ತನಿಖೆಯಲ್ಲಿ ಎಲ್ಲವೂ ಹೊರಬರುತ್ತವೆ ಎಂದು ಹೇಳಿದರು.
ಬಿಜೆಪಿಯಲ್ಲಿ ಬಣಗಳಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದೇನು ಬಹಳ ದೊಡ್ಡ ಸಮಸ್ಯೆ ಇಲ್ಲ. ಹೈಕಮಾಂಡ್ ಈಗಾಗಲೇ ಈ ಬಗ್ಗೆ ವಿಚಾರ ಮಾಡಿದೆ. ಕೆಲವೇ ದಿನಗಳಲ್ಲಿ ಆ ಸಮಸ್ಯೆ ಸಂಪೂರ್ಣವಾಗಿ ಬಗೆ ಹರಿಯುತ್ತದೆ ಎಂದರು.
ಮಾಜಿ ಡಿಸಿಎಂ ಕೆ. ಎಸ್ ಈಶ್ವರಪ್ಪ ಅವರು ಮತ್ತೊಮ್ಮೆ ಬ್ರಿಗೇಡ್ ಕಟ್ಟುತ್ರಿದ್ದಾರೆ ಎಂಬ ಪ್ರಶ್ನೆಗೆ ಅದರ ಬಗ್ಗೆನೂ ನಾವೆಲ್ಲ ಚಿಂತನೆ ಮಾಡುತ್ತೇವೆ ಎಂದು ಹೇಳಿದರು.
ಶಾ ಹೇಳಿಕೆಗೆ ಸಂಬಂಧವಿಲ್ಲ
ಕೇಂದ್ರ ಗೃಹ ಸಚಿವ ಅಮೀತ್ ಷಾ ಅವರ ಅಂಬೇಡ್ಕರ್ ಬಗೆಗಿನ ವಿವಾದಾತ್ಮಕ ಹೇಳಿಕೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿ ಸಂವಿಧಾನ ಸನ್ಮಾನ ಕಾರ್ಯಕ್ರಮಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನದ ರಚಿಸಿ 75 ವರ್ಷ ಆದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ, ನವೆಂಬರ್ 26 ರಿಂದಲೇ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.
ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್
BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer