ಬೆಂಗಳೂರು: ಪ್ರತಿಭಟನೆಗೆ ವೇದಿಕೆ ಹಾಕಲು ಅವಕಾಶ ಕೊಡುವುದಿಲ್ಲ; ಇದೇನು ಇವರ ಅಪ್ಪನ ಮನೆಯ ಸರಕಾರವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
“ಕೋಗಿಲು ಉಳಿಸಿ ಅಕ್ರಮ ವಲಸಿಗರನ್ನು ತೊಲಗಿಸಿ” ಎನ್ನುವ ಘೋಷವಾಕ್ಯದೊಂದಿಗೆ ಇಂದು ಬಾಗಲೂರು ಮುಖ್ಯ ರಸ್ತೆಯ ಕೌಂಟ್ರಿ ಕ್ಲಬ್ ಹತ್ತಿರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಇಂಥ ಗೊಡ್ಡು ಬೆದರಿಕೆಗೆ ಹೆದರುವವರು ಬಿಜೆಪಿ ಕಾರ್ಯಕರ್ತರಲ್ಲ; ಇದನ್ನು ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಮನೆ ಕೆಡವಿದ್ದೇ ಕಾಂಗ್ರೆಸ್ ಸರಕಾರ. ಆದರೆ, ಕೆ.ಸಿ.ವೇಣುಗೋಪಾಲ್ ಅವರು ಬೆದರಿಸಿದ ತಕ್ಷಣ ಸಿದ್ದರಾಮಯ್ಯನವರು ತಮ್ಮ ಸಿಎಂ ಕುರ್ಚಿ ಕಳಕೊಳ್ಳುವ ಭೀತಿಯಿಂದ ಅಕ್ರಮ ವಲಸಿಗರಿಗೆ ಮನೆ ಕೊಡಲು ರಾಜ್ಯ ಸರಕಾರ ಮುಂದಾಗಿದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿ ಕಸಿದುಕೊಳ್ಳಬೇಕೆಂಬ ಕಾರಣಕ್ಕಾಗಿ ಕೆ.ಸಿ.ವೇಣುಗೋಪಾಲ್ ಮೂಲಕ ಸಿಎಂಗೆ ಧಮ್ಕಿ ಹಾಕಿಸಿ ಅವರೂ ಅಕ್ರಮ ವಲಸಿಗರಿಗೆ ಮನೆ ಕೊಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಕೆ.ಸಿ.ವೇಣುಗೋಪಾಲ್ ಕರ್ನಾಟಕದ ಮುಖ್ಯಮಂತ್ರಿಯೇ? ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿಯೇ ಎಂದು ಕರ್ನಾಟಕದ ಜನರು ಪ್ರಶ್ನಿಸುತ್ತಿದ್ದಾರೆ ಎಂದು ನುಡಿದರು. ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ರಾಜ್ಯದಲ್ಲಿ 38 ಲಕ್ಷ ಜನರು ಮನೆಗಾಗಿ ಅರ್ಜಿ ಹಾಕಿದ್ದಾರೆ. ಡಾ. ಅಂಬೇಡ್ಕರ್ ಅವರ ಹೆಸರು ಹೇಳುವ ಮುಖ್ಯಮಂತ್ರಿಗಳು ಕಳೆದ ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರಕಾರವು ಒಂದೇ ಒಂದು ಮನೆ ಕೊಟ್ಟಿಲ್ಲ ಎಂದು ದೂರಿದರು.
ಅಕ್ರಮ ವಲಸಿಗರಿಗೆ ಮನೆ ಕೊಡಲು ಹೊರಟದ್ದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು. ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ಕೋಗಿಲು ಅಕ್ರಮವಾಸಿಗಳಿಗೆ ಅಯೋಗ್ಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ನಲ್ಲಿ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ನೀಡಿದ್ದಾರೆ. ತಿಂಗಳಿಗೆ 2-3 ಲಕ್ಷ ಲಂಚ ವಸೂಲಿ ಮಾಡುತ್ತಿದ್ದರು ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಲಂಚ ಪಡೆದು ಕರ್ನಾಟಕವನ್ನು ಬಾಂಗ್ಲಾದೇಶ ಮಾಡಲು ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರು ಮಾತೆತ್ತಿದರೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಹೇಳುತ್ತಾರೆ. ಇವರ ಅಂಥ ದಲಿತರಿಗೆ ಅನ್ಯಾಯ ಮಾಡಲು ಹೊರಟಿದ್ದಾರಲ್ಲವೇ ಎಂದು ಕೇಳಿದರು. ರಾಜ್ಯದ ತೆರಿಗೆದಾರರ ಹಣದಲ್ಲಿ ಕಟ್ಟಿದ ಮನೆಗಳನ್ನು ಅಕ್ರಮವಾಗಿ ನೆಲೆಸಿದವರಿಗೆ ಅಕ್ರಮವಾಗಿ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ ಎಂದು ದೂರಿದರು. ರಾಜ್ಯದಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಪ್ರಕಟಿಸಿದರು. ಸತ್ಯಕ್ಕೆ ಜಯ ಸಿಗಲಿದೆ ಎಂದು ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಕೇರಳದವರು ಇಲ್ಲಿ ಬಂದು ವಿವರ ಪಡೆದು ಹೋಗಿದ್ದಾರೆ. ಅವರು ರಾಜ್ಯಕ್ಕೆ ಬಂದಾಗ ಇಲ್ಲಿ ಬರಲು ಅವಕಾಶ ನೀಡಿದ್ದು ಸರಿಯಲ್ಲ; ಅವರನ್ನು ಬಂಧಿಸಬೇಕಿತ್ತು ಎಂದು ತಿಳಿಸಿದರು. ಬಾಂಗ್ಲಾ ದೇಶದಿಂದ ಬಂದ ರೋಹಿಂಗ್ಯಾಗಳಿಗೆ ಮನೆ ಕೊಡಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಕಾನೂನಾತ್ಮಕವಾಗಿ ಮನೆ ಕೊಡಿ; ಇಲ್ಲಿ ನಿಮಗೆ ವಿಶೇಷ ಪ್ರೀತಿ ಬಂದುದೇಕೆ ಎಂದು ಕೇಳಿದರು. ಹಣ ಕಟ್ಟಿ ಕಾಯುತ್ತಿರುವವರಿಗೆ ನೀವು ಮನೆ ಕೊಡುತ್ತಿಲ್ಲ ಎಂದು ಟೀಕಿಸಿದರು.
ಮಾಜಿ ಡಿಸಿಎಂ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮಾತನಾಡಿ, ಕಾಂಗ್ರೆಸ್ ಸರಕಾರಕ್ಕೆ ಆತ್ಮಸ್ಥೈರ್ಯ- ಸ್ವಾಭಿಮಾನ ಇಲ್ಲ ಎಂದು ಟೀಕಿಸಿದರು.
ತೆರವಾದ ಬಾಂಗ್ಲಾದೇಶೀಯರಿಗೆ 24 ಗಂಟೆಯೊಳಗೆ ಮನೆ ಕೊಡುವುದಾಗಿ ತಿಳಿಸಿದೆ. ಇದೊಂದು ಅನೈತಿಕ, ಕಾನೂನು ವಿರೋಧದ ಕ್ರಮ ಎಂದು ಆಕ್ಷೇಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್, ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಮತ್ತು ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕ ಎಸ್.ಆರ್. ವಿಶ್ವನಾಥ್, ಎನ್. ಮುನಿರತ್ನ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್, ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
‘ವೀಕೆಂಡ್ ವಿತ್ ರಮೇಶ್’ ಪಾಠವಾಗಿ ಇಡಿ, ‘ಶಿಕ್ಷಣ ವ್ಯವಸ್ಥೆ’ ಬದಲಾಯಿಸಿ: ‘ಡೆತ್ ನೋಟ್’ ಬರೆದಿಟ್ಟು ಯುವಕ ಆತ್ಮಹತ್ಯೆ








