ಹಾವೇರಿ: ದೇಶಕ್ಕೆ ಸಾಮಾಜಿಕ ನ್ಯಾಯ ಕೊಟ್ಟವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು, ಅವರ ಯೋಜನೆಯನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭೆ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಹಿರೆಕೆರೂರು ವಿಧಾನಸಭಾ ಕ್ಷೇತ್ರದ ಮಕರಿ, ನಾಗವಂದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವರು ಸಂಸತ್ತಿಗೆ ಬರದಂತೆ ನೋಡಿಕೊಂಡಿದ್ದರು. ಅವರು ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಆರು ಅಡಿ ಜಾಗವನ್ನೂ ಕಾಂಗ್ರೆಸ್ ಕೊಡಲಿಲ್ಲ. ಈಗ ಅಂಬೇಡ್ಕರ ಬಗ್ಗೆ ಮಾತನಾಡುತ್ತಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದು ಹೇಳಿದರು.
ಎಸ್ಸಿ ಎಸ್ಟಿ ಸುಮದಾಯಕ್ಕೆ ಕಾಂಗ್ರೆಸ್ ಯಾವುದೇ ಸಾಮಾಜಿಕ ನ್ಯಾಯ ನೀಡಿಲ್ಲ. ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಮೂವತ್ತು ವರ್ಷದಿಂದ ಬೇಡಿಕೆ ಇದ್ದರೂ ಯಾರೂ ಮಾಡಿರಲಿಲ್ಲ. ನನಗೂ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಹೇಳಿದರು. ನನಗೆ ಜೇನು ಕಡಿದರೂ ಆ ಸಮುದಾಯಗಳಿಗೆ ನ್ಯಾಯ ಕೊಡುತ್ತೇನೆ ಎಂದು ಎಸ್ಟಿಗೆ 3% ರಿಂದ ಶೇ 7% ಕ್ಕೆ ಹೆಚ್ಚಿಸಿದ್ದೇವೆ. ಎಸ್ಸಿ ಸಮುದಾಯಕ್ಕೆ 15% ರಿಂದ ಶೇ 17% ಕ್ಕೆ ಹೆಚ್ಚಳ ಮಾಡಿದ್ದೇನೆ. ಅದನ್ನು ಸಂವಿಧಾನದ ಸೆಡ್ಯೂಲ್ 9ರಲ್ಲಿ ಸೇರಿಸುವಂತೆ ಕೇಳುತ್ತಿದ್ದಾರೆ. ಅದಕ್ಕೂ ಮೊದಲೇ ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಜಾರಿಯಾಗಿದ್ದು, ಇದರಿಂದ ಎಸ್ಟಿ ಸಮುದಾಯದ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೀಸಲಾತಿ ಅಡಿ ಮೆಡಿಕಲ್ ಸೀಟು ದೊರೆತಿದೆ. ಸುಮಾರು ನಾಲ್ಕು ಸಾವಿರ ಇಂಜನೀಯರಿಂಗ್ ಹೆಚ್ಚಿಗೆ ಸೀಟು ದೊರೆತಿವೆ ಎಂದು ಹೇಳಿದರು.
ಮೋದಿ ಸುತ್ತ ಚುನಾವಣೆ
ಇಡೀ ದೇಶದಲ್ಲಿ ನರೇಂದ್ರ ನೋದಿ ಸುತ್ತ ಚುನಾವಣೆ ನಡೆಯುತ್ತಿದೆ. ಎಲ್ಲ ವರ್ಗ ಹಾಗೂ ಸಮಾಜದ ಜನರು ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ. ಅವರು ಹಂತ ಹಂತವಾಗಿ ಬೆಳೆದಿದ್ದಾರೆ. ಲಾಲ ಬಹದ್ದೂರು ಶಾಸ್ತ್ರಿ ಅವರ ನಂತರ ಅತ್ಯಂತ ದೇಶ ಭಕ್ತ ಮೋದಿ. ಅವರ ತಾಯಿ ತೀರಿಕೊಂಡಾಗ ಮೂರು ಗಂಟೆಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಿ ಮತ್ತೆ ದೇಶ ಸೇವೆಗೆ ಬಂದರು.
ಮೋದಿಯವರು ಹತ್ತು ವರ್ಷದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡಿದರು. ಕಾಂಗ್ರೆಸ್ ಇದ್ದಾಗ ದೇಶದ ಎಲ್ಲ ಭಾಗದಲ್ಲೂ ಭಯೋತ್ಪಾದನೆ ಇತ್ತು. ಮೋದಿ ಬಂದ ಮೇಲೆ ಪಾಕಿಸ್ತಾನದ ಭಯೋತ್ತಾದಕರ ನೆಲೆ ಮೇಲೆ ದಾಳಿ ಮಾಡಿ ದ್ವಂಶ ಮಾಡಿದರು. ಮೋದಿಯವರು ಭಯೋತ್ಪಾದಕರೆ ಭಯ ಪಡೆಯುವಂತೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರ ಗರೀಬಿ ಹಠಾವಾಯಿತು
ಇಂದಿರಾ ಗಾಂಧಿ ಗರೀಬಿ ಹಠಾವೊ ಅಂದರು. ಆದರೆ, ದೇಶದ ಬಡತನ ನಿರ್ಮೂಲನೆ ಆಗಲಿಲ್ಲ. ಕಾಂಗ್ರೆಸ್ ನಾಯಕರ ಬಡತನ ನಿರ್ಮೂಲನೆ ಆಯಿತು. ಧಾರವಾಡದಲ್ಲಿ ಮೋರೆ ಅಂತ ಕಾಂಗ್ರೆಸ್ ನಾಯಕ ಇದ್ದರು. ಅವರು ಕಾಂಗ್ರೆಸ್ ನಾಯಕರು ಅಧಿಕಾರ ಇದ್ದಾಗ ಕಬ್ಬು ಇದ್ದ ಹಾಗೆ ಇರುತ್ತಾರೆ ಅಧಿಕಾರ ಹೋದರೆ ಹತ್ತಿಕಟಿಗೆ ಆಗುತ್ತಾರೆ ಎಂದು ಹೇಳಿದರು.
ಮೋದಿಯವರು ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ. ಹತ್ತು ವರ್ಷದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆ ತಂದಿದ್ದಾರೆ. ಮುಂದಿನ ಐದು ವರ್ಷದಲ್ಲಿ ಇನ್ನೂ ಹದಿನೈದು ಕೋಟಿ ಜನರನ್ನು ಬಡತನ ಮುಕ್ತ ಮಾಡುವುದಾಗಿ ಹೇಳಿದ್ದಾರೆ.
ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ದೇಶದ ಎಲ್ಲ ಮನೆಗಳಿಗೂ ನೀರು ಕೊಟ್ಟಿದ್ದಾರೆ. ನನ್ನ ಅವಧಿಯಲ್ಲಿ ಮೂರು ವರ್ಷದಲ್ಲಿ ರಾಜ್ಯದಲ್ಲಿ 30 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಕೊವಿಡ್ ಸಂದರ್ಭದಲ್ಲಿ ದೇಶದ ನೂರ ಮೂವತ್ತು ಕೋಟಿ ಜನರಿಗೆ ಉಚಿತ ಲಸಿಕೆ ಕೊಟ್ಟಿದ್ದಾರೆ. ಇನ್ನೊಂದು ಅಸಾಧ್ಯವಾದ ಕಾರ್ಯ ಭ್ರಷ್ಟರನ್ನು ಹಿಡಿದು ಒಳಗೆ ಹಾಕುವ ಕೆಲಸ ಮಾಡಿದರು. ಯಡಿಯೂರಪ್ಪ ಮೊದಲು ಅಧಿಕಾರಕ್ಕೆ ಬಂದಾಗ ಭಾಗ್ಯ ಲಕ್ಷ್ಮೀ ಯೋಜನೆ ಮಾಡಿದರು. ಈಗ ಆ ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮೀಯ ಒಂದು ಲಕ್ಷ ಹಣ ಬಂದಿದೆ ಎಂದು ಹೇಳುತ್ತಿದ್ದಾರೆ ಎಂದರು.
ಸುಳ್ಳು ಗ್ಯಾರೆಂಟಿ
ಹೆಣ್ಣುಮಕ್ಕಳಿಗೆ ನಾನು ಸ್ತ್ರೀ ಸಾಮರ್ಥ್ಹ ಯೋಜನೆ ಮಾಡಿದ್ದೇವು. ಅದನ್ನು ಈ ಸರ್ಕಾರ ನಿಲ್ಲಿಸಿದೆ. ರೈತರಿಗೆ ರೈತ ಶಕ್ತಿ ಯೋಜನೆ, ಸ್ವಾಮಿ ವಿವೇಕಾನಂದ ಯೋಜನೆ ನಿಲ್ಲಿಸಿದರು.
ಈಗ ಕಾಂಗ್ರೆಸ್ ಸುಳ್ಳು ಗ್ಯಾರೆಂಟಿ ಹಿಡಿದುಕೊಂಡು ಬರುತ್ತಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ, ಖರ್ಗೆ, ಸಹಿ ಮಾಡುತ್ತಿದ್ದಾರೆ. ಇವರೇನು ರಿಸರ್ವ್ ಬ್ಯಾಂಕ್ ಗೌರ್ನರಾ? ಪ್ರಧಾನ ಮಂತ್ರಿನಾ, ರಾಷ್ಟ್ರಪತಿನಾ ? ಗ್ಯಾರೆಂಟಿ ಕಾರ್ಡ್ ಗಳನ್ನು ಅದೇ ಊರಿನ ಕಾಂಗ್ರೆಸ್ ಕಾರ್ಯಕರ್ತರು ಕೊಡಲು ಬರುವುದಿಲ್ಲ. ಬೇರೆ ಊರಿನ ಹೆಣ್ಣು ಮಕ್ಕಳು ಬಂದು ಗ್ಯಾರೆಂಟಿ ಕಾರ್ಡ್ ಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಅವರು ಆರಿಸಿ ಬರುವುದಿಲ್ಲ ಎನ್ನುವ ಸತ್ಯ ಗೊತ್ತಿದೆ. ಹೀಗಾಗಿ ಬೇರೆ ಊರಿನ ಮಹಿಳೆಯರನ್ನು ಕಳುಹಿಸುತ್ತಿದ್ದಾರೆ. ಅವರ ಮೋಸದ ಸುಳ್ಳು ಗ್ಯಾರೆಂಟಿ ಗಳಿಗೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.
ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಹಾಜರಿದ್ದರು.
ಮತದಾರರಿಗೆ ಆಮಿಷ ಪ್ರಕರಣ: ‘ಡಿ.ಕೆ ಶಿವಕುಮಾರ್’ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್